ಉದಯವಾಹಿನಿ, ಬಳ್ಳಾರಿ: ‘ಬಳ್ಳಾರಿ ಬಿಸಿಲು’ ಅಂದ್ರೆ ಸುಮ್ನೆ ಅಲ್ಲ. ಅದು ಮೈ ಸುಡುವ ಕೆಂಡದಂತಹ ತಾಪಮಾನಕ್ಕೆ ಹೆಸರುವಾಸಿ. ಈ ಬಾರಿ ಏಪ್ರಿಲ್ ತಿಂಗಳಲ್ಲೇ ಸೂರ್ಯನ ಪ್ರತಾಪ ಮಿತಿ ಮೀರಿದ್ದು, ಗಣಿನಾಡಿನ ಜನತೆ ಅಕ್ಷರಶಃ ಹೈರಾಣಾಗಿದ್ದಾರೆ. ಬೆಳಿಗ್ಗೆ 9 ಗಂಟೆ ಆಗುತ್ತಿದ್ದಂತೆ ರಣರಣ ಬಿಸಿಲು ಶುರುವಾಗುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಬಳ್ಳಾರಿಯ ಕನಿಷ್ಠ ಉಷ್ಣಾಂಶವೇ ಈಗ 38 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ನೆಲದ ಬಿಸಿಗೆ ಪಾದರಕ್ಷೆಗಳಿಲ್ಲದೆ ನಡೆಯುವುದು ಹಾಗಿರಲಿ, ರಸ್ತೆಯಲ್ಲಿ ಓಡಾಡುವ ವಾಹನ ಸವಾರರಿಗೂ ಬಿಸಿ ಗಾಳಿಯ ಹೊಡೆತ ತಪ್ಪುತ್ತಿಲ್ಲ.
ಈ ವರ್ಷ ಕಳೆದ ಬಾರಿಗಿಂತಲೂ ಹೆಚ್ಚು ತಾಪಮಾನ ದಾಖಲಾಗುತ್ತಿದ್ದು ಜನರು ದಣಿವಾರಿಸಿಕೊಳ್ಳಲು ನಾನಾ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಮನೆಯೊಳಗೆ ಫ್ಯಾನ್ ಹಾಕಿಕೊಂಡರೂ ಬಿಸಿ ಗಾಳಿಯೇ ಬರುತ್ತಿರುವುದು ಜನರ ನಿದ್ದೆಗೆಡಿಸಿದೆ.
ಕೂಲರ್‌ಗೆ ಭಾರೀ ಡಿಮ್ಯಾಂಡ್: ಬಳ್ಳಾರಿ ನಗರದ ಪ್ರತಿ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿಯೂ ಕೂಲರ್‌ಗಳದ್ದೇ ಕಾರುಬಾರು ನಡೆಯುತ್ತಿದೆ. ಸಾಮಾನ್ಯವಾಗಿ ಹೆಚ್ಚಿಗೆ ಮಾರಾಟವಾಗದೆ ಎಲೆಕ್ಟ್ರಾನಿಕ್ ಶಾಪ್‌ಗಳ ಒಳಗೆ ಪ್ರದರ್ಶನಕ್ಕಿಡುತ್ತಿದ್ದ ಏರ್ ಕೂಲರ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಖರೀದಿಸುತ್ತಿದ್ದಾರೆ.
ದುಬಾರಿ ಬೆಲೆಯ ಎಸಿ ಖರೀದಿಸಲು ಸಾಧ್ಯವಾಗದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರಿಗೆ ಈಗ ಕೂಲರ್‌ಗಳೇ ಸಂಜೀವಿನಿಯಾಗಿವೆ. ಗಾತ್ರ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯಕ್ಕೆ ಅನುಗುಣವಾಗಿ 5,000 ರೂ.ಯಿಂದ ಹಿಡಿದು 20,000 ರೂ. ವರೆಗಿನ ವಿವಿಧ ವಿನ್ಯಾಸದ ಕೂಲರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಗ್ರಾಹಕರ ದಂಡು: ವರ್ಷದ ಎಂಟು ತಿಂಗಳು ಶೋರೂಂ ಮೂಲೆ ಸೇರುತ್ತಿದ್ದ ಎಸಿ ಮತ್ತು ಕೂಲರ್‌ಗಳು ಈಗ ಹಾಟ್ ಕೇಕ್‌ನಂತೆ ಮಾರಾಟವಾಗುತ್ತಿವೆ. ಎಲೆಕ್ಟ್ರಾನಿಕ್ ಮಳಿಗೆಗಳ ಮಾಲೀಕರ ಪ್ರಕಾರ, ಕಳೆದೆರಡು ವಾರಗಳಿಂದ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ.
