ಉದಯವಾಹಿನಿ, ಶ್ರೀನಗರ: ಏಷ್ಯಾದ ಅತ್ಯಂತ ಉದ್ದದ ಮತ್ತು ಅತಿ ಎತ್ತರದಲ್ಲಿರುವ ಜೊಜಿಲಾ ಸುರಂಗ ಮಾರ್ಗ ಮೇ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ವರ್ಷದ ಎಲ್ಲಾ ಋತುವಿನಲ್ಲೂ ಸಂಚಾರಕ್ಕೆ ಅವಕಾಶವಿರುವ ಈ ಸುರಂಗಮಾರ್ಗ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನಡುವೆ ಸಂಪರ್ಕವನ್ನು ಸುಲಭಗೊಳಿಸುತ್ತದೆ. ಇದನ್ನು ದೇಶದ ಅತಿದೊಡ್ಡ ಮತ್ತು ಅತ್ಯಂತ ಸವಾಲಿನ ಪರ್ವತ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಹಿಮಾಲಯದಲ್ಲಿ 11,578 ಅಡಿ ಎತ್ತರದಲ್ಲಿ ನಿರ್ಮಿಸಲಾದ 13.153 ಕಿಲೋಮೀಟರ್ ಉದ್ದದ ಈ ಸುರಂಗ, ಶ್ರೀನಗರ-ಕಾರ್ಗಿಲ್-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವರ್ಷಪೂರ್ತಿ ಸಂಪರ್ಕ ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಹಿಮಾವೃತವಾದ ಮತ್ತು ಹಿಮಪಾತಕ್ಕೆ ಒಳಗಾಗುವ ಜೊಜಿಲಾವನ್ನು ಬೈಪಾಸ್ ಮಾಡುತ್ತದೆ. ಈ ಮೂಲಕ ಪ್ರತೀ ಚಳಿಗಾಲದಲ್ಲಿ ಲಡಾಖ್ ಅನ್ನು ಸಂಪರ್ಕಿಸಬಹುದಾಗಿದೆ.

ಸುಮಾರು 325 ಮೀಟರ್ ಸುರಂಗ ಕೊರೆಯುವ ಕಾರ್ಯ ಬಾಕಿ ಉಳಿದಿದೆ. ಕೆಲಸ ಭಾಗಶಃ ಅಂತಿಮ ಹಂತದಲ್ಲಿದ್ದು, ಬಹುದಿನಗಳ ನನಸು ಸದ್ಯದಲ್ಲೇ ನನಸಾಗಲಿದೆ ಎಂದು ಹೈದರಾಬಾದ್‌ನ ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ಅಧಿಕಾರಿಗಳು ತಿಳಿಸಿದ್ದಾರೆ.
“ಸಮಯಕ್ಕೆ ಸರಿಯಾಗಿ ಗುರಿ ಸಾಧಿಸಲು ತಂಡ ಕಠಿಣ ಹವಾಮಾನ ಪರಿಸ್ಥಿತಿಗಳಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಮೇ ಅಂತ್ಯದ ವೇಳೆಗೆ ಸುರಂಗ ಕೊರೆಯುವ ಕಾರ್ಯ ಪೂರ್ಣಗೊಳಿಸಲು ನಾವು ಉದ್ದೇಶಿಸಿದ್ದೇವೆ. ಈಗ ಕೇವಲ ಒಂದು ಸಣ್ಣ ಭಾಗ ಮಾತ್ರ ಉಳಿದಿದೆ. ಎರಡೂ ತುದಿಗಳು ಕೂಡಿದರೆ ಇದೊಂದು ದೊಡ್ಡ ಹೆಜ್ಜೆಯಾಗಲಿದೆ. ಇದನ್ನು ಎಂಜಿನಿಯರಿಂಗ್‌ನಲ್ಲಿ ‘ಹ್ಯಾಂಡ್‌ಶೇಕ್’ ಎಂದು ಕರೆಯಲಾಗುತ್ತದೆ. ಈ ಜೋಡಣೆ ಎಂಜಿನಿಯರಿಂಗ್ ಸಾಧನೆಯಷ್ಟೇ ಅಲ್ಲ, ನಮ್ಮ ಬಹುದಿನಗಳ ಕನಸು ನನಸಾಗುವುದರ ಸಂಕೇತವೂ ಆಗಿದೆ” ಎಂದು ಕಂಪನಿಯ ಜಂಟಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರ್ಪಾಲ್ ಸಿಂಗ್ ಮಾಹಿತಿ ಹಂಚಿಕೊಂಡರು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 17.03 ಕಿಲೋಮೀಟರ್ ಸಂಪರ್ಕ ರಸ್ತೆಗಳನ್ನು ಒಳಗೊಂಡ ಈ ಯೋಜನೆಯ ಒಟ್ಟು ವೆಚ್ಚವನ್ನು ₹6,809.69 ಕೋಟಿ ಎಂದು ಅಂದಾಜಿಸಿದೆ. ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದೆನಿಸಿಕೊಂಡಿರುವ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲಿನ ವಿಷಯವಾಗಿತ್ತು. ಸದ್ಯ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಶ್ರೀನಗರ-ಕಾರ್ಗಿಲ್-ಲೇಹ್ ಸಂಪರ್ಕ ಬೆಸೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ಸುರಂಗ ಮಾರ್ಗ ಸೇವೆಗೆ ಸಮರ್ಪಣೆಗೊಂಡ ನಂತರ ಭೂ ಕುಸಿತದ ಆತಂಕ ದೂರವಾಗಲಿದೆ. ಅಲ್ಲದೇ ಸಂಚಾರ ಸುರಕ್ಷೆ ಸುಧಾರಿಸುವುದರ ಜೊತೆಗೆ ಸಂಚಾರದ ಅವಧಿಯನ್ನೂ ಸಹ ಕಡಿಮೆ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!