ಉದಯವಾಹಿನಿ, ಬೆಂಗಳೂರು: ಕರ್ನಾಟಕದಲ್ಲಿ ಬಿಸಿಲ ಬೇಗೆ ತೀವ್ರವಾಗಿದೆ, ಉತ್ತರ ಒಳನಾಡು ಮತ್ತು ಕರಾವಳಿಯ ಹಲವು ಜಿಲ್ಲೆಗಳಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ. ರಾಯಚೂರು, ಕೊಪ್ಪಳ, ಬೆಳಗಾವಿ, ಬೀದರ್ ಮತ್ತು ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಿಸಲ ಬೇಗೆ ತಾಳಲಾಗದೇ ಜನರು ತಂಪುಪಾನೀಯಗಳ ಮೊರೆ ಹೋಗ್ತಿದ್ದಾರೆ. ಮತ್ತೊಂದು ಕಡೆ ಕೆಆರ್‌ಎಸ್‌ನಲ್ಲಿ ನೀರು ಆತಂಕಕಾರಿ ಮಟ್ಟಕ್ಕೆ ತಲುಪಿದೆ. ಜೂನ್‌ನಲ್ಲಿ ಸರಿಯಾಗಿ ಮಳೆ ಆಗದಿದ್ರೆ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದೆ.
ಅಯ್ಯೋ ರಾಮ ಏನ್ ಬಿಸಿಲು ಗುರು ಇದು, ಹೊರೆಗೆ ಹೋಗೋದಕ್ಕೆ ಆಗ್ತಿಲ್ಲ, ನೆತ್ತಿ ಸುಟ್ಟು ಹೋಗ್ತಿದೆ. ಅಷ್ಟೇ ಅಲ್ಲ ಬಿಸಿ ಗಾಳಿ ಬೇರೆ, ಯಾವ ವರ್ಷನೂ ಸೂರ್ಯ ಈ ಮಟ್ಟಕ್ಕೆ ಸುಡ್ತಿರಿಲಿಲ್ಲ ಅನ್ನೋ ಮಾತುಗಳು ಈಗ ಸಾಮಾನ್ಯವಾಗಿ ಬಿಟ್ಟಿದೆ. ಜನ್ರೂ ಕೂಡ ಬಿಸಿಲಿನಿಂದ ತಪ್ಪಿಸಿಕೊಳ್ಳೋಕೆ ಎಳನೀರು, ಕಲ್ಲಂಗಡಿ, ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಹೌದು. ಹವಾಮಾನ ಇಲಾಖೆ ರಾಜ್ಯದಲ್ಲಿ ಹೀಟ್ ವೇವ್ ಅಲರ್ಟ್ ನೀಡಿದೆ. ಮುಂದಿನ ಐದು ದಿನಗಳಲ್ಲಿ ಮೂರು ದಿನ ರಾಜ್ಯದ ಹಲವೆಡೆ ವಾಡಿಕೆಗಿಂತ ಮೂರು ಡಿಗ್ರಿ ಉಷ್ಣಾಂಶ ಹೆಚ್ಚಾಗಲಿದ್ದು, ಬಿಸಿಗಾಳಿ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಹೀಟ್ ವೇವ್ ಉಂಟಾಗಲಿದೆ. ಇದ್ರಿಂದಾಗ ಜನರು ಮತ್ತಷ್ಟು ಕಂಗೆಟ್ಟು ಹೋಗಿದ್ದಾರೆ. ಈ ಬಿಸಿಲನ್ನೇ ತಡೆಯೋಕೆ ಆಗ್ತಿಲ್ಲ. ಇನ್ನು ಹೆಚ್ಚಿನ ಬಿಸಿಲು ಅಂದ್ರೆ ಹೇಗಪ್ಪಾ ತಡೆದುಕೊಳ್ಳೋದು ಅಂತ ಆತಂಕಕ್ಕೆ ಒಳಗಾಗಿದ್ದಾರೆ.
