ಉದಯವಾಹಿನಿ, ವಾಷಿಂಗ್ಟನ್(ಅಮೆರಿಕ): ನನ್ನ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಲೆಬನಾನ್ ನಡುವಿನ 10 ದಿನಗಳ ಕದನ ವಿರಾಮ ಒಪ್ಪಂದದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ಮತ್ತು ಅಮೆರಿಕ ಉಭಯ ನಾಯಕರು ಮಂಗಳವಾರ ನಡೆಸಿದ ಮಾತುಕತೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ”ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಭಾರತದಲ್ಲಿ ನನ್ನ ಸ್ನೇಹಿತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಒಳ್ಳೆಯ ಸಂಭಾಷಣೆ ನಡೆಸಿದ್ದೇವೆ” ಎಂದಿದ್ದಾರೆ.
ಟ್ರಂಪ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದು, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ. ಅಲ್ಲದೆ, ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿಗಳ ಕುರಿತು ಉಭಯ ನಾಯಕರು ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದಾರೆ. 40 ನಿಮಿಷಗಳ ಕಾಲ ಮಾತುಕತೆ: ಭಾರತದ ಅಮೆರಿಕ ರಾಯಭಾರಿ ಸೆರ್ಗೆಯ್ ಗೋರ್ ಪ್ರಕಾರ, ಟ್ರಂಪ್-ಮೋದಿ ದೂರವಾಣಿ ಸಂಭಾಷಣೆಯ ಸಮಯದಲ್ಲಿ, ಇಬ್ಬರೂ ನಾಯಕರು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವ ಮತ್ತು ಸುರಕ್ಷಿತವಾಗಿಡುವ ಕುರಿತು ಮಹತ್ವ ಚರ್ಚೆ ನಡೆಸಿದರು. ಸುಮಾರು 40 ನಿಮಿಷಗಳ ಕಾಲ ಈ ಮಾತುಕತೆ ನಡೆಯಿತು. ಫೆಬ್ರವರಿ 28ರಂದು ಇರಾನ್ ಜೊತೆ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ಬಳಿಕ ಎರಡನೇ ಬಾರಿಗೆ ಮಂಗಳವಾರ ಇಬ್ಬರೂ ನಾಯಕರು ಫೋನ್ ಕರೆಯಲ್ಲಿ ಮಾತನಾಡಿದರು.
ಇದೇ ವೇಳೆ ಟ್ರಂಪ್, ಸದ್ಯ ನಡೆಯುತ್ತಿರುವ ಇರಾನ್ ಮತ್ತು ಯುಎಸ್ ಯುದ್ದದ ಅಂತ್ಯಕ್ಕೆ ಒಪ್ಪಂದಕ್ಕಾಗಿ ರಾಜತಾಂತ್ರಿಕ ಮಾತುಕತೆ ಅಂತಿಮಗೊಂಡರೆ ಪಾಕಿಸ್ತಾನಕ್ಕೆ ತೆರಳಲು ಸಿದ್ದವಿರುವುದಾಗಿ ತಿಳಿಸಿದ್ದಾರೆ. ಇಸ್ಲಾಮಾಬಾದ್ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಾದರೆ, ನಾನು ಅಲ್ಲಿಗೆ ತೆರಳುತ್ತೇನೆ. ಅವರಿಗೆ ನನ್ನ ಅಗತ್ಯವಿದೆ ಎಂದಿದ್ದಾರೆ. ಪಾಕಿಸ್ತಾನ – ಅಮೆರಿಕದ ಸಂಬಂಧವು ಸಕಾರಾತ್ಮಕವಾಗಿರುವ ಕುರಿತು ಮಾತನಾಡಿರುವ ಅವರು, ಪಾಕಿಸ್ತಾನದವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇರಾನ್ ಜೊತೆಗಿನ ಮಾತುಕತೆಗಳು ಮತ್ತು ಇಸ್ರೇಲ್ ಲೆಬನಾನ್ ಗಡಿಯಲ್ಲಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನಗಳು ಸೇರಿದಂತೆ ಪಶ್ಚಿಮ ಏಷ್ಯಾದಾದ್ಯಂತ ಅಮೆರಿಕವು ಬಹು ರಾಜತಾಂತ್ರಿಕ ಮಾರ್ಗಗಳನ್ನು ಮುನ್ನಡೆಸುತ್ತಿದೆ. ಇಸ್ರೇಲ್ ಮತ್ತು ಲೆಬನಾನ್ ಒಳಗೊಂಡ ಕದನ ವಿರಾಮ ಒಪ್ಪಂದವು ರೂಪುಗೊಳ್ಳುತ್ತಿದೆ. ಒಪ್ಪಂದಕ್ಕೆ ಹಿಜ್ಬುಲ್ಲಾ ಕೂಡ ಸೇರ್ಪಡೆಗೊಳ್ಳಬಹುದು. ಕದನ ವಿರಾಮಕ್ಕೆ ಎಲ್ಲರೂ ಒಪ್ಪುತ್ತಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
