ಉದಯವಾಹಿನಿ, ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ವಿವಾದ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಸ್ವಾಮೀಜಿ ಹೊಡೀತಾರೆ, ಮಸಾಜ್ ಮಾಡಿಸಿಕೊಳ್ತಾರೆ ಎನ್ನುವ ದೂರು ಬಂದ ಹಿನ್ನಲೆ ಮಕ್ಕಳ ಕಲ್ಯಾಣ ಸಮಿತಿ ವಿಚಾರಣೆಗೆ ಮುಂದಾಗಿದ್ದು, ವಚನಾನಂದ ಶ್ರೀ ಮೇಲೆ ಪೋಕ್ಸೋ ಕೇಸ್ ತೂಗುಗತ್ತಿ ನೇತಾಡುತ್ತಿದೆ.

ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಪಂಚಮಸಾಲಿ ಗುರುಪೀಠ ಸದ್ಯ ರಾಜ್ಯದಲ್ಲಿ ಬಹುದೊಡ್ಡ ಸುದ್ದಿಯಾಗಿದೆ. ಲೆಕ್ಕದ ವಿಚಾರವಾಗಿ ನಡೆದ ಗದ್ದಲ, ವಚನಾನಂದ ಸ್ವಾಮೀಜಿ ಪದಚ್ಯುತಿ ತನಕ ಬಂದು ನಿಂತಿದೆ. ಮಠದಲ್ಲಿದ್ದ ಮಕ್ಕಳ ಮೇಲೆ ಸ್ವಾಮೀಜಿ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸ್ವಾಮೀಜಿ ಬೈತಾರೆ, ಹೊಡೆಯುತ್ತಾರೆ, ಅನಾರೋಗ್ಯ ಇದ್ದಾಗ ಔಷಧಿ ನೀಡದೇ ಬೈದಿದ್ದಾರೆ ಎಂದು ಮಕ್ಕಳು ಆರೋಪ ಮಾಡಿ ದೂರು ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಂಡ ಪಂಚಮಸಾಲಿ ಮಠಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿದೆ.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ ಮಹೇಶ್, ನಾಗರಾಜ್, ದುರುಗಪ್ಪ ಸೇರಿದ ತಂಡ ಹಾಗೂ ಮಕ್ಕಳ ಕಲ್ಯಾಣಾಧಿಕಾರಿಗಳು, ವಚನಾನಂದ ಸ್ವಾಮೀಜಿಯ ವಿಚಾರಣೆ ನಡೆಸಿದ್ದಾರೆ. ಅಲ್ಲದೇ, ಮಠ ಹಾಗೂ ದಾಸೋಹ ಕೊಠಡಿಗೆ ತೆರಳಿ ಎರಡೂವರೆ ತಾಸು ವಿಚಾರಣೆ ನಡೆಸಿದೆ. ಅಲ್ಲದೆ ಇಂದು ದೂರು ನೀಡಿದ ಮಕ್ಕಳ ಕೌನ್ಸಲಿಂಗ್ ಮಾಡಲಿದ್ದು, ಏನಾದರೂ ಮಕ್ಕಳು ಸ್ವಾಮೀಜಿ ನಮ್ಮನ್ನು ಮಸಾಜ್ ಮಾಡಿಸಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಸ್ಟೇಟ್‌ಮೆಂಟ್ ಕೊಟ್ಟರೆ ಸ್ವಾಮೀಜಿಗೆ ಕಂಟಕ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.
ಇನ್ನು ಸ್ವಾಮೀಜಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಷಡ್ಯಂತ್ರ ರೂಪಿಸಲಾಗಿದೆ ಎಂದು ದಾಸೋಹ ಸಮಿತಿ ಅಧ್ಯಕ್ಷ ಹಾಗೂ ವಕೀಲ ಪ್ರಕಾಶ್ ಪಾಟೀಲ್ ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ವಚನಾನಂದ ಸ್ವಾಮೀಜಿ, ಸಂಕಷ್ಟಗಳು ಬರುತ್ತವೆ, ಹೋಗುತ್ತವೆ. ಮಕ್ಕಳ ವಿಚಾರದ ಬಗ್ಗೆ ವಿಚಾರಣೆ ಹಂತದಲ್ಲಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲ್ಲ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!