ಉದಯವಾಹಿನಿ, ನವದೆಹಲಿ: ʻಇಂದು ನನ್ನ ಗಂಡನ ಹುಟ್ಟುಹಬ್ಬ, ನಿಮ್ಮ ಪ್ರಶ್ನೆಗಳನ್ನ ಸ್ಬಲ್ಪ ಚಿಕ್ಕದಾಗಿ ಕೇಳಿʼ ಎಂದು ಸಂಸದೆ ಪ್ರಿಯಾಂಕಾ ಗಾಂಧಿ ಹಾಸ್ಯ ಮಾಡಿದ ಪ್ರಸಂಗ ನಡೆದಿದೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಒಂದು ದಿನದ ನಂತರ ದೆಹಲಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದ್ರು. ಈ ವೇಳೆ ಪತ್ರಕರ್ತರೊಬ್ಬರು ಇನ್ನಷ್ಟು ಪ್ರಶ್ನೆಗಳಿವೆ ನಿಮ್ಮ ಬಳಿ ಸಮಯ ಇದೆಯೇ? ಅಂತ ಪ್ರಶ್ನೆ ಮಾಡಿದ್ರು, ಇದಕ್ಕೆ ಮುಗುಳು ನಕ್ಕ ಪ್ರಿಯಾಂಕಾ, ಇಂದು ನನ್ನ ಪತಿಯ ಹುಟ್ಟುಹಬ್ಬ. ನಿಮ್ಮ ಪ್ರಶ್ನೆಗಳನ್ನ ಚಿಕ್ಕದಾಗಿ ಕೇಳಿ ಅಂತ ಹಾಸ್ಯ ಮಾಡಿದ್ರು. ಇದು ಅಲ್ಲಿದ್ದವರನ್ನ ನಗೆಗಡಲಲ್ಲಿ ತೇಲಿಸಿತು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಯನಾಡು ಸಂಸದೆ, ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಲೋಕಸಭೆಯಲ್ಲಿ ಅಗತ್ಯ ಮತ ಸಿಗದೇ ಹಿನ್ನಡೆಯಾಯಿತು. ಎನ್‌ಡಿಎ ನಾಯಕರಿಗೆ ಏಪ್ರಿಲ್ 17 ಕರಾಳ ದಿನವಾಗಿದೆ. ಏಕೆಂದರೆ, ಮೊದಲ ಬಾರಿಗೆ ಸೋಲಿನ ಭಯ ಕಂಡಿದ್ದಾರೆ. ಇದು ಎನ್‌ಡಿಎ ಸರ್ಕಾರದ ಅಹಂಕಾರಕ್ಕೆ ಮಹಿಳೆಯರು ಕೊಟ್ಟ ಉತ್ತರ. ಮಸೂದೆಯ ಸೋಲು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು. ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಸರ್ಕಾರದ ಪ್ರಯತ್ನ ವಿಫಲವಾಗಿದೆ ಎಂದು ತಿಳಿಸಿದ್ದಾರೆ.
