ಉದಯವಾಹಿನಿ, ಹೈದರಾಬಾದ್: ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವನ್ನು ವಿರೋಧಿಸಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿಯವರ ನಿವಾಸದ ಹೊರಗೆ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದೆ. ಈ ಹಿನ್ನೆಲೆ ಹೈದರಾಬಾದ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಎನ್. ರಾಮಚಂದರ್ ರಾವ್ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ.
ಸಂಸತ್ತಿನಲ್ಲಿ ಕಲಾಪದ ವೇಳೆ ಮಸೂದೆಗೆ ಕಾಂಗ್ರೆಸ್ ಬೆಂಬಲ ನೀಡದಿರುವುದನ್ನು ವಿರೋಧಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿ ಪ್ಲ್ಯಾನ್ ಮಾಡಿತ್ತು. ಇದರ ಬೆನ್ನಲ್ಲೇ ರಾಮಚಂದರ್ ರಾವ್ ಅವರನ್ನು ಪೊಲೀಸರು ಗೃಹಬಂಧನದಲ್ಲಿ ಇರಿಸಿದ್ದಾರೆ. ಪೊಲೀಸರ ಕ್ರಮವನ್ನು ರಾವ್ ಟೀಕಿಸಿದ್ದು, ಪ್ರಜಾಪ್ರಭುತ್ವ, ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಕರೆದಿದ್ದಾರೆ.
ಶುಕ್ರವಾರ (ಏ.17) ಸಂಜೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕರು ಹೈದರಾಬಾದ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಾಹುಲ್ ಗಾಂಧಿಯವರ ಪ್ರತಿಕೃತಿಯನ್ನು ಸುಟ್ಟು ಅಸಮಾಧಾನ ಹೊರಹಾಕಿದ್ದರು. ಈ ಮೂಲಕ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಕುರಿತು ಕಾಂಗ್ರೆಸ್ ಪಕ್ಷದ ನಿಲುವಿನ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು.
ಪಕ್ಷದ ಉನ್ನತ ಮೂಲಗಳ ಪ್ರಕಾರ, ಭಾರತದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂಘಟಿತ ಪ್ರತಿಭಟನೆಗೆ ಬಿಜೆಪಿ ತನ್ನ ರಾಜ್ಯ ಘಟಕಗಳಿಗೆ ನಿರ್ದೇಶನ ನೀಡಿದೆ. ಲಿಂಗ ಸಮಾನತೆಗಾಗಿ ಐತಿಹಾಸಿಕ ಹೆಜ್ಜೆ ಇಡುವುದನ್ನು ತಡೆಯುವಲ್ಲಿ ವಿರೋಧ ಪಕ್ಷದ ಪಾತ್ರವನ್ನು ಬಹಿರಂಗಪಡಿಸುವುದು ಈ ಅಭಿಯಾನದ ಗುರಿಯಾಗಿದೆ ಎಂದು ವರದಿಯಾಗಿದೆ.
