ಉದಯವಾಹಿನಿ, ರಾಯ್‌ಪುರ : ಕಡತಗಳು ನಾಪತ್ತೆಯಾಗಿದ್ದರಿಂದ ಬೇಸರಗೊಂಡ ಯುವಕನೊಬ್ಬ ಸರ್ಕಾರಿ ಅಧಿಕಾರಿಯ ಮೇಜಿನ ಮೇಲೆ ಬಾದಾಮಿ ಸುರಿದಿರುವ ಘಟನೆ ಛತ್ತೀಸ್‍ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಅಧಿಕಾರಿಯ ನೆನಪಿನ ಶಕ್ತಿ ಸುಧಾರಣೆಗಾಗಿ ಬಾದಾಮಿ ಸುರಿಯಲಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಆಸ್ತಿ ಫೈಲ್ ಕಾಣೆಯಾದ ನಂತರ ಈ ರೀತಿ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಘಟನೆ ವಸತಿ ಮಂಡಳಿ ಕಚೇರಿಯಲ್ಲಿ ನಡೆದಿದೆ. ದೂರುದಾರ ತರುಣ್ ಸಾಹು, ಪದೇ ಪದೆ ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ. ಅಧಿಕಾರಿಗಳಿಗೆ ಕಡತವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಹು ಸುಮಾರು ಒಂದು ವರ್ಷದ ಹಿಂದೆ ಮರುಮಾರಾಟದ ಮೂಲಕ ಇಡಬ್ಲ್ಯುಎಸ್ ಫ್ಲ್ಯಾಟ್ ಖರೀದಿಸಿದ್ದಾಗಿ ತಿಳಿಸಿದ್ದಾರೆ. ಆದರೆ ಫೈಲ್ ಕಾಣೆಯಾಗಿರುವುದರಿಂದ ಮ್ಯೂಟೇಶನ್ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಅಗತ್ಯ ದಾಖಲೆಗಳಿಲ್ಲದೆ, ಅವರಿಗೆ ಅಧಿಕೃತ ಸ್ವಾಮ್ಯ ಹಕ್ಕು ಪಡೆಯಲು ಸಾಧ್ಯವಾಗಿಲ್ಲ.
