ಉದಯವಾಹಿನಿ, ಬೀಜಿಂಗ್‌: ಪತಿ ಜೊತೆ ಜಗಳವಾಡಿ ಸಿಟ್ಟಾದ ಪತ್ನಿಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ 1.5 ಕೋಟಿ ರೂ. ಎಸೆದ ಘಟನೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಶಾಂಟೌ ನಗರದಲ್ಲಿ ನಡೆದಿದೆ. ವರದಿಗಳ ಪ್ರಕಾರ,ಪತಿ ಮತ್ತು ಪತ್ನಿಯ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ಆ ಕೋಪದಲ್ಲಿ ಆಕೆ ತನ್ನ ಕೈಯಲ್ಲಿದ್ದ ನೋಟುಗಳ (Money) ಕಂತೆಗಳನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾಳೆ. ಹಾಂಕಾಂಗ್ ಕರೆನ್ಸಿಯ 1,000 ಮುಖಬೆಲೆಯ ನೋಟುಗಳನ್ನು ಆಕೆ ಎಸೆದಿದ್ದು ಅದರ ಒಟ್ಟು ಮೌಲ್ಯ ಸುಮಾರು 1.5 ಕೋಟಿ ರೂ.ಗಿಂತ ಹೆಚ್ಚಿತ್ತು.
ಮೇಲಿನಿಂದ ಹಣದ ಮಳೆ ಬೀಳುತ್ತಿರುವುದನ್ನು ಕಂಡ ರಸ್ತೆಯಲ್ಲಿದ್ದ ಜನರು ಹಣ ಆಯ್ದುಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಆ ಪ್ರದೇಶದಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಹಣವನ್ನು ಸಂಗ್ರಹಿಸಿದವರು ಅದನ್ನು ವಾಪಸ್ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು.
ಚೀನಾದಲ್ಲಿ ಕಟ್ಟುನಿಟ್ಟಾದ ಸಿಸಿಟಿವಿ (CCTV) ಕಣ್ಗಾವಲು ಇರುವುದರಿಂದ ಹಣವನ್ನು ಸಂಗ್ರಹಿಸಿದವರನ್ನು ಸುಲಭವಾಗಿ ಪತ್ತೆಹಚ್ಚಲು ಸಾಧ್ಯವಾಗಿದೆ. ಪರಿಣಾಮ ಹೆಚ್ಚಿನ ಹಣವು ಈಗಾಗಲೇ ಆ ಮಹಿಳೆಗೆ ಮರಳಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!