ಉದಯವಾಹಿನಿ, ಪ್ಯಾರಿಸ್
: ಈಗಾಗಲೇ ಚುನಾಯಿತ ಅಧ್ಯಕ್ಷರನ್ನು ಪದಚ್ಯುತಗೊಳಿಸಿ, ಸೇನಾಡಳಿತ ಹೇರಲಾಗಿರುವ ನೈಜರ್‌ನಲ್ಲಿ ದಂಗೆ ಬುಗಿಲೆದ್ದಿದ್ದು, ಈ ಹಿನ್ನೆಲೆಯಲ್ಲಿ ವಿದೇಶಿ ನಾಗರಿಕರು ಅದರಲ್ಲೂ ಪಾಶ್ಚಿಮಾತ್ಯ ದೇಶಗಳ ಜನರು ದೇಶ ಬಿಟ್ಟು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ೨೬೨ ಯುರೋಪಿಯನ್ ನಾಗರಿಕರನ್ನು ಒಳಗೊಂಡಿರುವ ಫ್ರಾನ್ಸ್‌ನ ಮೊದಲ ವಿಮಾನವು ಇದೀಗ ನೈಜರ್ ದೇಶದಿಂದ ಪ್ಯಾರಿಸ್ ನಗರ ತಲುಪಿದೆ. ಕಳೆದ ವಾರ ಸೇನಾಡಳಿತ ಬಂದ ಬಳಿಕ ನೈಜರ್‌ನಲ್ಲಿ ಫ್ರಾನ್ಸ್ ವಿರೋಧಿ ದಂಗೆಗಳು ತಾರಕಕ್ಕೇರಿದೆ. ಅದೂ ಅಲ್ಲದೆ ಫ್ರಾನ್ಸ್ ರಾಯಭಾರಿ ಕಚೇರಿ ಮೇಲೆ ಕೂಡ ದಾಳಿ ನಡೆಸಲಾಗಿದೆ. ಫ್ರಾನ್ಸ್ ಜನರ ಮೇಲೆ ದಾಳಿ ನಡೆಸಲಾಗುವ ಭೀತಿ ಇರುವ ಹಿನ್ನೆಲೆಯಲ್ಲಿ ಇದೀಗ ನೈಜರ್‌ನಿಂದ ತಮ್ಮ ನಾಗರಿಕರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಫ್ರೆಂಚ್ ಸರ್ಕಾರ ಮುಂದಾಗಿದೆ. ಅದರಂತೆ ಮೊದಲ ಬ್ಯಾಚ್‌ನಲ್ಲಿ ಇದೀಗ ಫ್ರೆಂಚ್ ನಾಗರಿಕರು ಸೇರಿದಂತೆ ಸುಮಾರು ೨೬೨ ನಾಗರಿಕರನ್ನು ಪ್ಯಾರಿಸ್‌ಗೆ ಕರೆತರಲಾಗಿದೆ. ಆದರೆ ಇದರ ನಡುವೆ ನೈಜರನಲ್ಲಿರುವ ಫ್ರೆಂಚ್ ಸೈನಿಕರನ್ನು ಯಾವುದೇ ಕಾರಣಕ್ಕೂ ಸ್ಥಳಾಂತರಿಸುವುದಿಲ್ಲ ಎಂದು ತಿಳಿಸಿದೆ. ನೈಜರ್‌ನಲ್ಲಿರುವ ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ ಹೋರಾಡಲು ಸದ್ಯ ೧೦೦೦ ಸಾವಿರಕ್ಕೂ ಅಧಿಕ ಫ್ರೆಂಚ್ ಸೈನಿಕರನ್ನು ನಿಯೋಜಿಸಲಾಗಿದ್ದು, ಹಾಗಾಗಿ ಅವರು ಅಲ್ಲೇ ಉಳಿಯಲಿದ್ದಾರೆ ಎನ್ನಲಾಗಿದೆ. ಇದರ ನಡುವೆ ಇತರ ಯುರೋಪಿಯನ್ನರಿಗೆ ಸಹಾಯ ಮಾಡಲು ಫ್ರಾನ್ಸ್‌ನ ಪ್ರಸ್ತಾಪವನ್ನು ತೆಗೆದುಕೊಳ್ಳುವಂತೆ ಜರ್ಮನಿ ತನ್ನ ಪ್ರಜೆಗಳನ್ನು ಒತ್ತಾಯಿಸಿದೆ.
