ಉದಯವಾಹಿನಿ, ಶ್ರೀನಗರ: ಕಳೆದ ವರ್ಷ ಲಷ್ಕರ್-ಎ-ತೈಬಾ ಉಗ್ರರು ನಡೆಸಿದ ದಾಳಿಯಿಂದ ನಲುಗಿದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಎಲ್ಲಾ ಪ್ರವಾಸೋದ್ಯಮ ಸೇವಾ ಪೂರೈಕೆದಾರರಿಗೆ ವಿಶಿಷ್ಟವಾದ ಕ್ಯೂಆರ್ ಕೋಡ್ ಆಧಾರಿತ ಗುರುತಿನ ವ್ಯವಸ್ಥೆಯನ್ನು ಪರಿಚಯಿಸಿದೆ.
ಈ ವ್ಯವಸ್ಥೆಯಿಂದ ಕುದುರೆ ಸವಾರಿ ನಡೆಸುವವರು, ವ್ಯಾಪಾರಿಗಳು ಹಾಗೂ ನೋಂದಾಯಿತ ಸೇವೆ ಒದಗಿಸುವವರನ್ನು ಸುಲಭವಾಗಿ ಗುರುತಿಸಲು ಮತ್ತು ಪರಿಶೀಲಿಸಲು ಸುಲಭವಾಗಲಿದೆ. ಕಳೆದ ವರ್ಷ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಿಂದ ನಲುಗಿದ ಪಹಲ್ಗಾಮ್‌ಗೆ ಭೇಟಿ ನೀಡುವವರ ವಿಶ್ವಾಸವನ್ನು ಮತ್ತೆ ಗಳಿಸಲು ಈ ವ್ಯವಸ್ಥೆ ಜಾರಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿಯೊಬ್ಬ ಸೇವಾ ಪೂರೈಕೆದಾರರನ್ನು ಪೊಲೀಸರು ಸರಿಯಾಗಿ ಪರಿಶೀಲಿಸಿ, ನಂತರ ಅಧಿಕಾರಿಗಳು ನೋಂದಾಯಿಸಿಕೊಂಡು QR ಕೋಡ್ ಒದಗಿಸಿದ್ದಾರೆ.

ಈ QR ಕೋಡ್‌ನ್ನು ಪ್ರವಾಸಿಗರು ತಮ್ಮ ಮೊಬೈಲ್ ಫೋನ್‌ನಿಂದ ಸ್ಕ್ಯಾನ್ ಮಾಡಿದಾಗ, ಅವರಿಗೆ ಸಂಬಂಧಪಟ್ಟ ಮಾಹಿತಿ ಲಭ್ಯವಾಗಲಿದೆ. ಈ ಕ್ರಮವು ಯಾವುದೇ ಅನಧಿಕೃತ ವ್ಯಕ್ತಿಗಳು ಪ್ರವಾಸಿ ತಾಣದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಖಚಿತಪಡಿಸುತ್ತದೆ. ಪ್ರತಿಯೊಬ್ಬರ ಹಿನ್ನೆಲೆಯನ್ನು ಪರಿಶೀಲಿಸಿ, ಯಾವುದಾದರೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸಿ ಅಧಿಕಾರಿಗಳು ಅವರಿಗೆ QR ಕೋಡ್‌ ಒದಗಿಸಿದ್ದಾರೆ.

QR ಕೋಡ್‌ ಸ್ಕ್ಯಾನ್‌ ಮಾಡಿದಾಗ ಸೇವಾ ಪೂರೈಕೆದಾರರ ಹೆಸರು, ಪೋಷಕರ ವಿವರ, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ನೋಂದಣಿ ಸಂಖ್ಯೆ, ಕಾರ್ಯಾಚರಣೆಯ ಮಾರ್ಗ ಮತ್ತು ಅವರು ಪೊಲೀಸ್ ಪರಿಶೀಲನೆಗೆ ಒಳಪಟ್ಟಿದ್ದಾರೆಯೇ ಎಂಬ ಮಾಹಿತಿ ದೊರೆಯಲಿದೆ. ಪ್ರವಾಸೋದ್ಯಮ ಪಾಲುದಾರರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಇದು ಸೇವಾ ಪೂರೈಕೆದಾರರ ದೃಢೀಕರಣ ಮತ್ತು ಪ್ರವಾಸಿಗರ ಸುರಕ್ಷತೆಗೆ ಉತ್ತಮ ಮಾರ್ಗ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!