ಉದಯವಾಹಿನಿ, ಯಕೃತ್ತು ನಮ್ಮ ದೇಹದಲ್ಲಿನ ಒಂದು ಪ್ರಮುಖ ಅಂಗವಾಗಿದ್ದು, ಇದನ್ನು ದೇಹದ ಶಕ್ತಿಕೇಂದ್ರ ಎಂದೂ ಕರೆಯಲಾಗುತ್ತದೆ. ಇದು ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುವುದು, ರಕ್ತವನ್ನು ಶುದ್ಧೀಕರಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಅಗತ್ಯ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಇದು ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಾಗಿ ಲಿವರ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಇಂದಿನ ಕಳಪೆ ಜೀವನಶೈಲಿ, ಆನಾರೋಗ್ಯಕ ಆಹಾರ ಪದ್ಧತಿ ಯಕೃತ್ತಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿವೆ. ಹಾಗಾಗಿ ಲಿವರ್ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19 ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
2010ರಲ್ಲಿ, ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (EASL) 1966 ರಲ್ಲಿ ಪ್ರಾರಂಭವಾದ EASL ನ ಸ್ಥಾಪನಾ ವಾರ್ಷಿಕೋತ್ಸವದ ಗೌರವಾರ್ಥವಾಗಿ ಮೊದಲ ಬಾರಿಗೆ ವಿಶ್ವ ಲಿವರ್ ದಿನವನ್ನು ಆಚರಿಸಿತು. ಅಂದಿನಿಂದ ಯಕೃತ್ತಿನ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಲಿವರ್ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವ ಯಕೃತ್ತಿನ ದಿನದ ವಿಶೇಷ ಸಂದರ್ಭದಲ್ಲಿ, ಜನರಿಗೆ ಯಕೃತ್ತಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳು ಹಾಗೂ ಅದರ ಚಿಕಿತ್ಸೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.ಒಮ್ಮೆ ಲಿವರ್ ಹಾನಿಗೊಳಗಾದರೆ, ಅದಕ್ಕೆ ಚಿಕಿತ್ಸೆ ನೀಡುವುದು ಕಷ್ಟಕರ ಮತ್ತು ದುಬಾರಿಯಾಗಬಹುದು. ಆದ್ದರಿಂದ, ಇಂದಿನಿಂದ ನಾವು ನಮ್ಮ ಲಿವರ್ ಆರೋಗ್ಯವನ್ನು ನೋಡಿಕೊಳ್ಳುವುದು ಬಹಳ ಮುಖ್ಯ. ಒಂದು ಸಣ್ಣ ಬದಲಾವಣೆಯೂ ಸಹ ನಮ್ಮ ಜೀವನವನ್ನು ದೀರ್ಘ ಮತ್ತು ಉತ್ತಮಗೊಳಿಸುತ್ತದೆ ಎಂದು ವಿಶ್ವ ಲಿವರ್ ದಿನ ನಮಗೆ ನೆನಪಿಸುತ್ತದೆ.ಈ ದಿನ ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಪ್ರೋತ್ಸಾಹ ನೀಡಲಾಗುತ್ತದೆ.
