
ಉದಯವಾಹಿನಿ, ಮೆದಿನಾಪುರ(ಪಶ್ಚಿಮ ಬಂಗಾಳ): ಇದೇ 23ರಂದು ವಿಧಾನಸಭೆ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು (ಭಾನುವಾರ) ಒಂದೇ ದಿನ ನಾಲ್ಕು ಕಡೆ ರ್ಯಾಲಿಗಳನ್ನು ನಡೆಸಿ ಬಳಿಕ ಜನರ ಜೊತೆ ಆಪ್ತವಾಗಿ ಕಾಲ ಕಳೆದರು.
ಇಂದು ಪ್ರಧಾನಿ ಮೋದಿ ಪುರುಲಿಯಾ, ಜಾರ್ಗ್ರಾಮ್, ಮೆದಿನಿಪುರ ಮತ್ತು ಬಿಷ್ಣುಪುರದಲ್ಲಿ ಪ್ರಚಾರ ನಡೆಸಿದರು. ಬಳಿಕ ಜಾರ್ಗ್ರಾಮ್ನಲ್ಲಿನ ಸಣ್ಣ ಚುರುಮುರಿ ಅಂಗಡಿಗೆ ತೆರಳಿ, ಬಂಗಾಳದ ಜನಪ್ರಿಯ ತಿಂಡಿಯಾದ “ಝಲ್ಮುರಿ”ಯನ್ನು ಸವಿದು, ಅದನ್ನು ಅಲ್ಲಿದ್ದ ಮಹಿಳೆಯರಿಗೂ ಹಂಚಿದರು.
ತನ್ನ ಗೂಡಂಗಡಿಗೆ ಅನಿರೀಕ್ಷಿತವಾಗಿ ಬಂದ ಪ್ರಧಾನಿ ಮೋದಿ ಅವರನ್ನು ಕಂಡು ಅಂಗಡಿ ಮಾಲೀಕ ಅಚ್ಚರಿಯ ಜೊತೆಗೆ ಸಂತಸಪಟ್ಟರು. ಝಲ್ಮುರಿಯನ್ನು ತಯಾರಿಸುವಂತೆ ಕೇಳಿದ ಪ್ರಧಾನಿ, ಅದಕ್ಕೆ ಪ್ರತಿಯಾಗಿ ನಿಗದಿತ ಹಣವನ್ನೂ ನೀಡಿದರು. ಪ್ರಧಾನಿಯವರ ಈ ಸಹಜ ನಡೆ ಅಲ್ಲಿದ್ದ ಜನರ ಗಮನ ಸೆಳೆಯಿತು.
ಮೋದಿ ಜೊತೆ ಚುರುಮುರಿ ಸವಿದ ಮಹಿಳೆಯರು: ಅಂಗಡಿಯಾತ ಚುರುಮುರಿ (ಝಲ್ಮುರಿ) ತಯಾರಿಕೊಟ್ಟ ಬಳಿಕ ಪ್ರಧಾನಿ ಮೋದಿ ಅವರು ಅದನ್ನು ಅಲ್ಲಿದ್ದ ಮಹಿಳೆಯರಿಗೆ ನೀಡಿದರು. ಈ ವೇಳೆ ದೇಶದ ಪ್ರಧಾನಿ ತಮ್ಮ ಜೊತೆ ಆಪ್ತವಾಗಿ ಕಾಲ ಕಳೆಯುತ್ತಿರುವುದನ್ನು ಕಂಡ ಜನರು ಅಚ್ಚರಿಗೊಂಡರು. ಅಲ್ಲದೆ, ತಮ್ಮ ಮೊಬೈಲ್ಗಳಲ್ಲಿ ವಿಡಿಯೋ, ಫೋಟೋ ತೆಗೆದುಕೊಂಡರು. ಜಾರ್ಗ್ರಾಮ್ನಲ್ಲಿನ ಗೂಡಂಗಡಿಯಲ್ಲಿ ಜನರೊಂದಿಗೆ ಚುರುಮುರಿ ಸವಿದಿದ್ದನ್ನು ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ನಾಲ್ಕು ರ್ಯಾಲಿಗಳ ನಡುವೆ, ಜಾರ್ಗ್ರಾಮ್‌ನಲ್ಲಿ ರುಚಿಕರವಾದ ಝಲ್ಮುರಿಯನ್ನು ಸವಿದೆವು ಎಂದು ಬರೆದುಕೊಂಡಿದ್ದಾರೆ.
