ಉದಯವಾಹಿನಿ, ದುಬೈ: ಪರ್ಷಿಯನ್ ಗಲ್ಫ್‌ನಲ್ಲಿ ಇರಾನ್‌ನೊಂದಿಗಿನ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆ ಯುಎಇ ತನ್ನ ತೈಲ ವ್ಯಾಪಾರದಲ್ಲಿ ಅಮೆರಿಕದ ಡಾಲರ್ ಬದಲು ಚೀನಾದ ಯುವಾನ್ ಕರೆನ್ಸಿಯನ್ನು ಬಳಸುವ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ವಾಷಿಂಗ್ಟನ್‌ನಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ, ಯುಎಇ ಸೆಂಟ್ರಲ್ ಬ್ಯಾಂಕ್ ಗವರ್ನರ್ ಖಾಲಿದ್ ಮೊಹಮ್ಮದ್ ಬಲಾಮಾ ಅವರು ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ಮತ್ತು ಯುಎಸ್ ಟ್ರೆಷರಿ, ಫೆಡರಲ್ ರಿಸರ್ವ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಂಘರ್ಷದಿಂದಾಗಿ ಯುಎಇಯ ತೈಲ ಮತ್ತು ಗ್ಯಾಸ್ ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಟ್ಯಾಂಕರ್‌ಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು, ಡಾಲರ್‌ನಲ್ಲಿ ಬರುವ ತೈಲದ ಆದಾಯ ಗಣನೀಯವಾಗಿ ಕುಸಿದಿದೆ. ಇದರಿಂದ ಯುಎಇಯ ವಿದೇಶಿ ವಿನಿಮಯ ಭಂಡಾರಕ್ಕೆ ಒತ್ತಡ ಬಂದರೆ ಅಥವಾ ಹೂಡಿಕೆದಾರರ ವಿಶ್ವಾಸ ಕುಸಿದರೆ, ಡಾಲರ್ ಲಿಕ್ವಿಡಿಟಿ ಕುಗ್ಗಿದಲ್ಲಿ ತೈಲ ವ್ಯಾಪಾರವನ್ನು ಬದಲಿ ಕರೆನ್ಸಿಗಳಲ್ಲಿ ನಡೆಸುವ ಸಾಧ್ಯತೆಯ ಬಗ್ಗೆ ಯುಎಇ ಅಧಿಕಾರಿಗಳು ಸೂಚಿಸಿದ್ದಾರೆ. ಅಂತಹ ಬದಲಿ ಕರೆನ್ಸಿಗಳಲ್ಲಿ ಚೀನಾದ ಯುವಾನ್ ಪ್ರಮುಖವಾಗಿದೆ. ಈ ನಡೆ ಅಮೆರಿಕದ ಡಾಲರ್‌ನ ಜಾಗತಿಕ ವ್ಯಾಪಾರದಲ್ಲಿ ಅಧಿಪತ್ಯಕ್ಕೆ ಸವಾಲು ಒಡ್ಡುವ ಸಾಧ್ಯತೆ ಇದೆ. ಆದರೆ ಯುಎಸ್ ಅಧಿಕಾರಿಗಳ ಪ್ರಕಾರ, ಫೆಡರಲ್ ರಿಸರ್ವ್ ಸಾಮಾನ್ಯವಾಗಿ ತೀವ್ರ ಆರ್ಥಿಕ ಒತ್ತಡ ಎದುರಿಸುವ ದೇಶಗಳಿಗೆ ಮಾತ್ರ ಸ್ವ್ಯಾಪ್ ಲೈನ್ ನೀಡುತ್ತದೆ. ಯುಕೆ, ಕೆನಡಾ, ಜಪಾನ್, ಸ್ವಿಟ್ಜರ್‌ಲ್ಯಾಂಡ್, ಯುರೋಪಿಯನ್ ಯೂನಿಯನ್‌ನಂತಹ ದೇಶಗಳೊಂದಿಗೆ ಈಗಾಗಲೇ ಸ್ಥಿರ ಸ್ವ್ಯಾಪ್ ಲೈನ್‌ಗಳಿವೆ.
