ಉದಯವಾಹಿನಿ, ಕೌಲಾಲಂಪುರ(ಮಲೇಷ್ಯಾ): ದೇಶದ ಬಡ ಕಾಲೊನಿ ಎಂದೇ ಕರೆಯಲಾಗುವ ಇಲ್ಲಿನ ಬೊರ್ನಿಯೊ ದ್ವೀಪದ ಕರಾವಳಿ ಪ್ರದೇಶದಲ್ಲಿರುವ ಗ್ರಾಮವು ಅಗ್ನಿ ದುರಂತಕ್ಕೀಡಾಗಿದೆ. ಇಲ್ಲಿನ ಮನೆಗಳು ಒತ್ತೊತ್ತಾಗಿ ಇರುವುದರಿಂದ ಒಂದು ಸಾವಿರಕ್ಕೂ ಅಧಿಕ ಸುಟ್ಟು ಭಸ್ಮವಾಗಿವೆ.
ಭಾರೀ ಅವಘಡದ ಬಳಿಕ ಇಲ್ಲಿ ವಾಸಿಸುತ್ತಿದ್ದ 9 ಸಾವಿರಕ್ಕೂ ಅಧಿಕ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯ ಆಡಳಿತದ ಸಿಬ್ಬಂದಿ ಸ್ಥಳದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಡಕನ್ ಜಿಲ್ಲೆಗೆ ಸೇರಿರುವ ಈ ಬಡ ಗ್ರಾಮದಲ್ಲಿ ಭಾನುವಾರ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ. ಸಮುದ್ರದ ದಂಡೆಯಲ್ಲಿರುವ ಈ ಗ್ರಾಮದಲ್ಲಿನ ಮನೆಗಳನ್ನು ಕಟ್ಟಿಗೆಗಳು, ಇತರ ದಹಿಸುವ ವಸ್ತುಗಳಿಂದ ಅಕ್ಕಪಕ್ಕದಲ್ಲಿ ಸಾಲಾಗಿ ಕಟ್ಟಲಾಗಿದೆ. ಯಾವುದೇ ಒಂದು ಮನೆಯಲ್ಲಿ ಬೆಂಕಿ ಹೊತ್ತಿಕೊಂಡ ಇಡೀ ಪ್ರದೇಶಕ್ಕೆ ಹಬ್ಬಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ತಿಳಿಸಿದೆ.
ಬಲವಾದ ಗಾಳಿ ಮತ್ತು ಮನೆಗಳ ರಚನೆಯಿಂದಾಗಿ ಬೆಂಕಿಯು ವ್ಯಾಪಿಸಲು ಕಾರಣವಾಗಿದೆ. ಕಿರಿದಾದ ಪ್ರವೇಶ ಮಾರ್ಗಗಳು ಮತ್ತು ವಾಹನ ಸಂಚಾರಕ್ಕೆ ಅವಕಾಶ ಇಲ್ಲದ್ದರಿಂದ ದುರಂತಕ್ಕೀಡಾದ ಪ್ರದೇಶಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ಬೆಂಕಿಯನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಮನೆಗಳು ಮಾತ್ರ ನಾಶ, ಯಾವುದೇ ಸಾವಿಲ್ಲ: ಭೀಕರ ಅಗ್ನಿ ಅವಘಡ ಸಂಭವಿಸಿದರೂ, ಅದೃಷ್ಟವಶಾತ್ ಯಾವುದೇ ಸಾವು-ನೋವು ದಾಖಲಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರದೇಶದ ಜನರನ್ನು ತಕ್ಷಣಕ್ಕೆ ಖಾಲಿ ಮಾಡಿಸಿ ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಸಮುದ್ರದ ಮೇಲೆ ನಿರ್ಮಿಸಲಾದ ಅನೌಪಚಾರಿಕ ವಸತಿ ಪ್ರದೇಶ ಇದಾಗಿದೆ. ಮಲೇಷ್ಯಾದ ಬಡ ರಾಜ್ಯಗಳಲ್ಲಿ ಒಂದಾದ ಸಬಾಹ್ ಕರಾವಳಿ ಪ್ರದೇಶದಲ್ಲಿ ಈ ಗ್ರಾಮವಿದೆ. ಇಲ್ಲಿನ ಮನೆಗಳ ರಚನೆಯು ಕಿಕ್ಕಿರಿದು ತುಂಬಿದೆ. ಮರ ಮತ್ತು ಇತರ ದಹನಕಾರಿ ವಸ್ತುಗಳಿಂದ ನಿರ್ಮಿಸಲ್ಪಟ್ಟಿವೆ. ಮೂಲಭೂತ ಮೂಲಸೌಕರ್ಯಗಳ ಕೊರತೆಯಿದೆ. ಇಲ್ಲಿನ ನಿವಾಸಿಗಳು ಕಡಿಮೆ ಆದಾಯ ಅಥವಾ ಬಡ ಸಮುದಾಯಗಳಿಗೆ ಸೇರಿದ್ದಾರೆ. ಇದರಲ್ಲಿ ಕೆಲವರು ಮಲೇಷ್ಯಾದ ನಾಗರಿಕರಲ್ಲದವರೂ ಇದ್ದಾರೆ.
ಗ್ರಾಮದ ಮುಖ್ಯಸ್ಥ ಷರೀಫ್ ಹಾಶಿಮ್ ಮಾತನಾಡಿ, ಅಡುಗೆ ಮನೆಯ ಬೆಂಕಿಯಿಂದಾಗಿ ಈ ಅಗ್ನಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ನಿಖರ ಕಾರಣ ದೃಢಪಟ್ಟಿಲ್ಲ. ತನಿಖೆ ನಡೆಸಲಾಗುತ್ತಿದೆ. ಸರ್ಕಾರ ಮತ್ತು ವಿವಿಧ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಸಮುದ್ರದ ದಂಡೆಯಲ್ಲಿರುವ ಗ್ರಾಮಗಳಲ್ಲಿ ಬೆಂಕಿ ಅವಘಡಗಳು ಪದೇ ಪದೆ ನಡೆಯುತ್ತಿರುತ್ತವೆ.
