ಉದಯವಾಹಿನಿ, ಟೆಹ್ರಾನ್(ಇರಾನ್): ಖಟ್ಟರ್​ ಇಸ್ಲಾಂವಾದಿ ಮತ್ತು ಖಮೇನಿಗಳ ನಿರ್ದೇಶನದಂತೆ ನಡೆಯುವ ವಿಶೇಷ ಪಡೆಯಾದ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ಈಗ ಇಡೀ ಇರಾನ್​ ಮತ್ತು ಅದರ ಸೇನೆಯನ್ನು ತನ್ನ ನಿಯಂತ್ರಣಕ್ಕೆ ಪಡೆದಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಇರಾನ್​ ಧರ್ಮಗುರು ಮೊಜ್ತಬಾ ಖಮೇನಿ ಅವರನ್ನೂ ಹಿಂದಿಕ್ಕಿ, ದೇಶದ ನೀತಿ-ನಿರ್ಧಾರಗಳನ್ನು ನಿರ್ಣಯಿಸುವ ಅಧಿಕಾರವನ್ನು ಐಆರ್​ಜಿಸಿ ಕಮಾಂಡರ್​ ಮೇಜರ್ ಜನರಲ್​ ಅಹ್ಮದ್​ ವಾಹಿದಿ ಮತ್ತು ಅವರ ಆಪ್ತ ವಲಯ ತನ್ನದಾಗಿಸಿಕೊಂಡಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ.

ಎರಡನೇ ಸುತ್ತಿನ ಶಾಂತಿ ಸಂಧಾನಕ್ಕಾಗಿ ಪಾಕಿಸ್ತಾನಕ್ಕೆ ಬರಲು ಸಿದ್ಧ ಎಂದು ಅಮೆರಿಕ ಘೋಷಿಸಿದೆ. ಆದರೆ, ಇರಾನ್​ ಇದನ್ನು ನಿರಾಕರಿಸಿದೆ. ಅದೇ ರೀತಿ, ಹಾರ್ಮುಜ್​ ಜಲಮಾರ್ಗದಲ್ಲಿ ಹಡಗುಗಳ ಮೇಲೆ ಏಕಪಕ್ಷೀಯವಾಗಿ ದಾಳಿ ನಡೆಸಿದೆ. ಈ ನಡೆಯನ್ನು ಗಮನಿಸಿದರೆ, ಅಲ್ಲಿನ ಅಧ್ಯಕ್ಷರು, ಧರ್ಮಗುರು ಮತ್ತು ರಾಜತಾಂತ್ರಿಕ ಅಧಿಕಾರಿಗಳು ಎಲ್ಲ ಅಧಿಕಾರವನ್ನು ಕಳೆದುಕೊಂಡಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

IRGC ಕಮಾಂಡರ್ ಹೊಸ ಸುಪ್ರೀಂ ಲೀಡರ್?: ಖಮೇನಿಗಳ ವಿಶೇಷ ಭದ್ರತಾ ಪಡೆ ಎಂದೇ ಕರೆಸಿಕೊಳ್ಳುವ ಐಆರ್​ಜಿಸಿಯ ಕಮಾಂಡರ್​ ಆಗಿರುವ ಅಹ್ಮದ್​ ವಾಹಿದಿ ದೇಶದ ಆಡಳಿತ ಮತ್ತು ಸೇನೆಯ ನಿಯಂತ್ರಣವನ್ನು ತನ್ನದಾಗಿಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

ಕಾರಣ, ಹೊಸ ಧರ್ಮಗುರು ಮೊಜ್ತಬಾ ಖಮೇನಿ ಅವರು ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ವಿದೇಶಾಂಗ ಸಚಿವ ಅಬ್ಬಾಸ್​ ಅರಾಘ್ಚಿ, ಸಂಸತ್ ಸ್ಪೀಕರ್​ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಅಮೆರಿಕದ ಜೊತೆ ಮೊದಲ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರು. ಇದೀಗ, ಅವರ ಹೇಳಿಕೆಗಳೂ ತಗ್ಗಿವೆ. ಅಮೆರಿಕದ ಜೊತೆಗಿನ ಸಂಧಾನವನ್ನು ಇರಾನ್​ ನೇರವಾಗಿ ನಿರಾಕರಿಸಿದೆ. ಈ ಎಲ್ಲ ಬೆಳವಣಿಗಳನ್ನು ಅವಲೋಕಿಸಿದರೆ ಐಆರ್​ಜಿಸಿ ಇರಾನ್​ ಅನ್ನು ತನ್ನ ವಶಕ್ಕೆ ಪಡೆದಿದೆ ಎಂಬುದು ತಿಳಿಯುತ್ತದೆ ಎಂದು ವಾಷಿಂಗ್ಟನ್ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ವಾರ್ (ISW) ವಿಶ್ಲೇಷಿಸಿದೆ.

 

Leave a Reply

Your email address will not be published. Required fields are marked *

error: Content is protected !!