ಉದಯವಾಹಿನಿ, ರಿಯಾದ್(ಸೌದಿ ಅರೇಬಿಯಾ): ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರೆದ ಬೆನ್ನಲ್ಲೇ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಸೌದಿ ಅರೇಬಿಯಾದ ಹಿರಿಯ ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳು ಮತ್ತು ಪ್ರಾದೇಶಿಕ ಪರಿಸ್ಥಿತಿಯ ಕುರಿತು ಚರ್ಚಿಸಿದ್ದಾರೆ.
“ಗೌರವಾನ್ವಿತ ಎನ್ಎಸ್ಎ ಅಜಿತ್ ದೋವಲ್ ಅವರು ಏಪ್ರಿಲ್ 19ರಂದು ರಿಯಾದ್‌ಗೆ ಭೇಟಿ ನೀಡಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲಿ ರಾಯಭಾರಿ ಡಾ.ಸುಹೇಲ್ ಖಾನ್ ಮತ್ತು ರಾಜಕೀಯ ವ್ಯವಹಾರಗಳ ಉಪ ಸಚಿವ ಡಾ.ಸೌದ್ ಅಲ್-ಸತಿ ಅವರು ಬರಮಾಡಿಕೊಂಡರು. ನಂತರ, ಅವರು ಇಂಧನ ಸಚಿವ ಎಚ್.ಆರ್.ಎಚ್.ಪ್ರಿನ್ಸ್ ಅಬ್ದುಲಜೀಜ್ ಬಿನ್ ಸಲ್ಮಾನ್, ವಿದೇಶಾಂಗ ಸಚಿವ ಎಚ್.ಎಚ್. ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಡಾ.ಮುಸೇದ್ ಅಲ್-ಐಬಾನ್ ಅವರೊಂದಿಗೆ ಸಭೆ ನಡೆಸಿದರು” ಎಂದು ಸೌದಿ ಅರೇಬಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದೆ. ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸಲು ಈ ವಾರ ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ಪ್ರಸ್ತಾಪಗಳ ನಡುವೆ ದೋವಲ್ ಅವರ ಸೌದಿ ಅರೇಬಿಯಾ ಭೇಟಿ ಮಹತ್ವ ಪಡೆದಿದೆ. ಏಪ್ರಿಲ್ 11 ಮತ್ತು 12ರಂದು ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಮೊದಲ ಸುತ್ತಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿತ್ತು.
ಜಾಗತಿಕ ಭದ್ರತಾ ವಿಷಯಗಳ ಕುರಿತು ಭಾರತದ ಸರಣಿ ರಾಜತಾಂತ್ರಿಕ ಮಾತುಕತೆಗಳ ಮಧ್ಯೆ ಈ ಭೇಟಿ ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಏಪ್ರಿಲ್ 17ರಂದು ದೋವಲ್, ಉಕ್ರೇನ್‌ನ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ರುಸ್ಟೆಮ್ ಉಮೆರೋವ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದ್ದರು.
ಮತ್ತೊಂದೆಡೆ, ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿಂದು ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಇದರ ಬಳಿಕ ದಕ್ಷಿಣ ಕೊರಿಯಾ ಅಧ್ಯಕ್ಷರು ಮೋದಿ ಅವರೊಂದಿಗೆ ಮತ್ತೊಂದು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಗಳ ನಂತರ ಮೋದಿ ಅವರು ದಕ್ಷಿಣ ಕೊರಿಯಾ ಅಧ್ಯಕ್ಷರಿಗೆ ಭೋಜನ ಕೂಟ ಆಯೋಜಿಸಲಿದ್ದಾರೆ. ಇದಲ್ಲದೆ, ಅಧ್ಯಕ್ಷ ಲೀ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಇದಕ್ಕಾಗಿ ರಾಷ್ಟ್ರಪತಿ ಭವನದಲ್ಲಿ ಗೌರವಾರ್ಥ ಔತಣಕೂಟ ಏರ್ಪಡಿಸಲಾಗಿದೆ.
ಇದಕ್ಕೂ ಮುನ್ನ ಇಂದು ಬೆಳಗ್ಗೆ, ಅಧ್ಯಕ್ಷ ಲೀ, ತಮ್ಮ ಪತ್ನಿ ಕಿಮ್ ಹಿಯಾ-ಕ್ಯುಂಗ್ ಅವರೊಂದಿಗೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಿದರು. ಲೀ ಜೇ ಮ್ಯುಂಗ್ ಅವರು ನೀಡಿರುವ ಲಿಖಿತ ಸಂದರ್ಶನದಲ್ಲಿ, ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷದಿಂದಾಗಿ ನಿರ್ಣಾಯಕ ಹಡಗು ಮಾರ್ಗವನ್ನು ಪರಿಣಾಮಕಾರಿಯಾಗಿ ಮುಚ್ಚುವುದರಿಂದ ಜಾಗತಿಕ ತೈಲ ಬೆಲೆಗಳು ಹೆಚ್ಚಾಗುತ್ತಿವೆ. ಮತ್ತು ಪ್ರಮುಖ ಕೈಗಾರಿಕಾ ಸಾಮಗ್ರಿ ಪೂರೈಕೆ ಸರಪಳಿಗಳು ಅಡ್ಡಿಪಡಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
