ಉದಯವಾಹಿನಿ, ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಿಇಟಿ ಪರೀಕ್ಷೆ ಸಿದ್ಧತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿದ್ಧತೆ ಮಾಡಿಕೊಂಡಿದೆ. ಹುಡುಗರು 1,44,380, ಹುಡುಗಿಯರು 1,86,099 ಹಾಗೂ ವಿಶೇಷ ಚೇತನರು 970 ಸೇರಿದಂತೆ ಒಟ್ಟು 3,30,479 ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟು 745 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಉಪ ಮುಖ್ಯ ಅಧೀಕ್ಷರು 745, ವಸ್ತ್ರ ಸಂಹಿತಾಧಿಕಾರಿ, 745, ಪರೀಕ್ಷಾ ಕೇಂದ್ರದ ಸಿಬ್ಬಂದಿ 12,665, ಕೊಠಡಿ ಮೇಲ್ವಿಚಾರಕರು 13,770, ಫ್ರಿಸ್ಕಿಂಗ್ ದಳ 3,304, ಮುಖ ಚಹರೆ ದಳ 3,304 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಒಟ್ಟು 15,265 ಸಿಸಿಟಿವಿ ಕ್ಯಾಮರಾ ಇರಲಿವೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆಯು ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ನಡೆಯಲಿದೆ. ಏ.23ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ಹಾಗೂ ಏ.24ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನೇಮಕಾತಿ ಪರೀಕ್ಷೆಗಳಿಗೆ ಮಾಡುವ ಹಾಗೆ ಈ ಪರೀಕ್ಷೆಗೂ ಕ್ಯಾಮರಾ ಕಣ್ಗಾವಲು ಇರುತ್ತದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ 745 ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ನಡೆಸಲಿದ್ದಾರೆ.
