ಉದಯವಾಹಿನಿ, ಬೆಂಗಳೂರು: ಡಿಸಿಆರ್‌ಇ ಇನ್ಸ್‌ಪೆಕ್ಟರ್‌ಗೆ ಮೇಲಧಿಕಾರಿಗಳ ಕಿರುಕುಳ ಆರೋಪ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿರುದ್ಧ ಡಿಜಿಪಿಗೆ ಎಸ್‌ಪಿ ಪತ್ರ ಬರೆದಿರುವ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್‌ ಅವರು ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ವರದಿ ಅಗಿರುವುದನ್ನ ಗಮನಿಸಿದ್ದೇನೆ.‌ ಡಿಸಿಆರ್‌ಇ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಎಂಬುವರು ಸಾಕಷ್ಟು ಆರೋಪಗಳನ್ನ ಮಾಡಿದ್ದಾರೆ. ಎಸ್‌ಪಿ ಕಾಶಿನಾಥ್ ಪತ್ರ ಬರೆದಿದ್ದಾರೆ. ಈ ಎರಡು ಪ್ರಕರಣಗಳ ಕುರಿತು ಡಿಜಿಪಿಯವರನ್ನ ವರದಿ ಕೇಳಿದ್ದೇನೆ. ವರದಿ ಬಳಿಕ ಸತ್ಯಾಸತ್ಯತೆಯನ್ನ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಶಾಸಕರಾದ ಎನ್.ಎ ಹ್ಯಾರೀಸ್ ಅವರ ಮಕ್ಕಳ ನಿವಾಸಗಳ ಮೇಲೆ ದಾಳಿ ನಡೆಸಿರುವ ಒಳ ವಿಚಾರಗಳು ನಮಗೆ ತಿಳಿದಿಲ್ಲ. ಯಾವ ವಿಚಾರಕ್ಕೆ ದಾಳಿ ನಡೆಸಿದ್ದಾರೆ? ಏನೆಲ್ಲ ಸಿಕ್ಕಿದೆ‌ ಎಂಬುದನ್ನು ಇಡಿ ಅಧಿಕಾರಿಗಳು ಮಾಹಿತಿ ನೀಡಬೇಕು. ಸಾಮಾನ್ಯವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುತ್ತಾರೆ. ಅಲ್ಲಿಯವರೆಗೂ ಕಾಯಬೇಕು. ಇದರ ನಡುವೆ ನಾವು ಹೇಳಿಕೆಗಳನ್ನು ಕೊಟ್ಟರೆ ಅಪ್ರಸ್ತುತ ಆಗುತ್ತದೆ ಎಂದರು.

ಬಿಟ್‌ಕಾಯಿನ್ ಕೇಸಲ್ಲಿ ಎಸ್‌ಐಟಿ ತನಿಖೆ ವಿಳಂಬ: ಬಿಟ್‌ಕಾಯಿನ್ ಹಗರಣದ ಕುರಿತಂತೆ ರಾಜ್ಯದಲ್ಲಿ ಎಸ್‌ಐಟಿ ರಚನೆ ಮಾಡಲಾಗಿತ್ತು. ತನಿಖೆ ಕೊನೆ ಹಂತದಲ್ಲಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿದೆ. ಅನೇಕ ವಿಚಾರಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅಂತಿಮ ವರದಿ ಕೊಡಬೇಕು. ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!