ಉದಯವಾಹಿನಿ, 2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದರು. ಸುಂದರ ತಾಣದಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆದು ನೆತ್ತರು ಹರಿಸಿದ್ದರು ಪಾಕ್ ಉಗ್ರರು . ಇದಕ್ಕೆ ಹೆಜ್ಜೆ-ಹೆಜ್ಜೆಗೂ ದಿಟ್ಟ ಉತ್ತರ ನೀಡುತ್ತಲೇ ಬಂದಿದ್ದ ಭಾರತೀಯ ಸೇನೆ, ಪ್ರತೀಕಾರಕ್ಕಾಗಿ ಕಾಯುತ್ತಲೇ ಇತ್ತು. ಕೊನೆಗೂ ಸಿಕ್ಕ ಸಮಯ ಬಳಸಿಕೊಂಡ ಭಾರತೀಯ ಸೇನೆ ನರಮೇಧ ನಡೆಸಿದ್ದ ಪಾತಕಿಗಳನ್ನು ಹತ್ಯೆಗೈದಿತು. ಶ್ರೀನಗರದ ದಚಿಗಮ್ ಅರಣ್ಯ ಪ್ರದೇಶದಲ್ಲಿ ʻಆಪರೇಷನ್ ಮಹಾದೇವ್ʼ ಕಾರ್ಯಾಚರಣೆ ವೇಳೆ ಮೂವರು ಉಗ್ರರನ್ನ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಹತ್ಯೆಗೈದಿತು.
ಇದೀಗ ಪಹಲ್ಗಾಮ್ ನರಮೇಧಕ್ಕೆ 1 ವರ್ಷ ಸಮೀಪಿಸುತ್ತಿದ್ದು, ಹಳೆಯ ನೆನೆಪುಗಳು ಮತ್ತೆ ಮರುಕಳಿಸುತ್ತಿವೆ. ಆ ದಿನ ಪ್ರವಾಸಿಗರ ಮೇಲೆ ದಾಳಿ ನಡೆಸುತ್ತಿದ್ದ ಕುದುರೆ ರೈಡರ್ ಸೈಯದ್ ಆದಿಲ್ ಹುಸೇನ್ ಶಾ ಧೈರ್ಯ ಮಾಡಿ ಓರ್ವನ ಉಗ್ರನಿಂದ ರೈಫಲ್ ಕಸಿದುಕೊಳ್ಳಲು ಯತ್ನಿಸಿ ಸಾವನ್ನಪ್ಪಿದ್ದರು. ಮೃತರ ಕುಟುಂಬಕ್ಕೆ ಸರ್ಕಾರದಿಂದ ಎಲ್ಲಾ ಪರಿಹಾರ ನೀಡಲಾಗಿದ್ದರೂ, ಮನೆ ಮಗ ಜೀವ ಕಳೆದುಕೊಂಡಿದ್ದನ್ನ ನೆನೆದು ಪೋಷಕರು ಕಣ್ಣೀರಿಟ್ಟಿದ್ದಾರೆ.
ಉಗ್ರರ ಗುಂಡಿಗೆ ಬಲಿಯಾದ ಮಗನ ತಂದೆ ಸೈಯದ್ ಹೈದರ್ ಶಾ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ, ಇದ್ದ ಒಬ್ಬ ಮಗನನ್ನ ಕಳೆದುಕೊಂದು ದಿಕ್ಕಿಲ್ಲದಂತಾಗಿದ್ದ ನಮಗೆ ಸರ್ಕಾರ ಎಲ್ಲಾ ಪರಿಹಾರ ಕಲ್ಪಿಸಿದೆ. ಆರ್ಥಿಕ ಪರಿಹಾರ, ಶಾಶ್ವತ ಸರ್ಕಾರಿ ಉದ್ಯೋಗ, ಮನೆ ಮತ್ತು ಪುನರ್ವಸತಿಗಾಗಿ ಎಲ್ಲಾ ರೀತಿಯ ಸಹಕಾರಗಳನ್ನ ನೀಡಿದೆ. ಇಂದು ಏನೇ ಪರಿಹಾರ ಸಿಕ್ಕಿದ್ದರು, ನಮ್ಮ ಮಗ ಮರಳಿ ಬರೋದಿಲ್ಲ ಅನ್ನೋದಂತೂ ಸತ್ಯ. ಇದು ನೆನೆಸಿಕೊಂಡಾಗ ನಮ್ಮ ಮನಸ್ಸಿಗೂ ಶಾಂತಿ ಸಿಗಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
