ಉದಯವಾಹಿನಿ, ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಸ್ಪರ್ಧಿಸಲಿರುವ ಸುಮಾರು ಶೇ. 23 ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಶೇ. 22 ರಷ್ಟು ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂದು ಅಫಿಡವಿಟ್ನಲ್ಲಿ ತಿಳಿಸಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಮಾಡಿದೆ.1,445 ಅಭ್ಯರ್ಥಿಯಲ್ಲಿ 338 ಅಂದರೆ, ಶೇ 23ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವಿದ್ದರೆ, 295 ಅಂದರೆ, ಶೇ 20ರಷ್ಟು ಜನರು ತಮ್ಮ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿದೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. 16 ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ ಹೊಂದಿದ್ದಾಗಿ ತಿಳಿಸಿದ್ದು, 80 ಅಭ್ಯರ್ಥಿಗಳು ಕೊಲೆ ಯತ್ನ ಪ್ರಕರಣ ಹೊಂದಿರುವುದಾಗಿ ಉಮೇದುವಾರಿಕೆಯಲ್ಲಿ ತಿಳಿಸಿದ್ದಾರೆ.
ವರದಿ ವಿಶ್ಲೇಷಣೆ ಪ್ರಕಾರ ಪ್ರಮುಖ ಪಕ್ಷಗಳ ಪೈಕಿ, ಬಿಜೆಪಿಯಿಂದ 141 ಅಭ್ಯರ್ಥಿಗಳಲ್ಲಿ 102 (ಶೇ. 72), ಟಿಎಂಸಿಯಿಂದ 142 ಅಭ್ಯರ್ಥಿಗಳಲ್ಲಿ 49 (ಶೇ. 35), ಸಿಪಿಐ(ಎಂ) ನಿಂದ 100 ಅಭ್ಯರ್ಥಿಗಳಲ್ಲಿ 51 (ಶೇ. 51) ಮತ್ತು ಕಾಂಗ್ರೆಸ್‌ನಿಂದ 142 ಅಭ್ಯರ್ಥಿಗಳಲ್ಲಿ 37 (ಶೇ. 26) ಜನರು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ಇದರಲ್ಲಿ 142 ಕ್ಷೇತ್ರಗಳ ಪೈಕಿ 63 (ಶೇ 44) ಕ್ಷೇತ್ರಗಳು ರೆಡ್ ಅಲರ್ಟ್ ಕ್ಷೇತ್ರಗಳಾಗಿದ್ದು, ಇಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.ಶ್ರೀಮಂತ ಅಭ್ಯರ್ಥಿಗಳು: 1,445 ಅಭ್ಯರ್ಥಿಗಳಲ್ಲಿ 321 (ಶೇ. 22) ಅಭ್ಯರ್ಥಿಗಳು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಪ್ರಮುಖ ಪಕ್ಷಗಳ ಪೈಕಿ, ಟಿಎಂಸಿಯಿಂದ 142 ಅಭ್ಯರ್ಥಿಗಳಲ್ಲಿ 103 (ಶೇ. 73), ಬಿಜೆಪಿಯಿಂದ 141 ಅಭ್ಯರ್ಥಿಗಳಲ್ಲಿ 73 (ಶೇ. 52), ಕಾಂಗ್ರೆಸ್‌ನಿಂದ 142 ಅಭ್ಯರ್ಥಿಗಳಲ್ಲಿ 36 (ಶೇ. 25) ಮತ್ತು ಸಿಪಿಐ(ಎಂ)ನಿಂದ 100 ಅಭ್ಯರ್ಥಿಗಳಲ್ಲಿ 33 (ಶೇ. 33) ಜನರು 1 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಎರಡನೇ ಹಂತದಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 1.21 ಕೋಟಿ ರೂ. ಆಗಿದೆ ಎಂದು ವರದಿ ತಿಳಿಸಿದೆ.
