ಉದಯವಾಹಿನಿ, ಟೆಹ್ರಾನ್ (ಇರಾನ್​): ಅಮೆರಿಕ ಮತ್ತು ಇರಾನ್​ ನಡುವಿನ ಎರಡು ವಾರಗಳ ಕದನ ವಿರಾಮ ಅಂತ್ಯಗೊಳ್ಳುತ್ತಿದ್ದು, ಯುದ್ಧ ಅಂತ್ಯಗೊಳಿಸುವ ಕುರಿತು ಪಾಕಿಸ್ತಾನದಲ್ಲಿ ಎರಡನೇ ಸುತ್ತಿನ ಮಾತುಕತೆ ಆರಂಭವಾಗುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ಈ ಬೆನ್ನಲ್ಲೇ ಇದೀಗ ಅಮೆರಿಕ ಮತ್ತು ಇರಾನ್​ ಎರಡು ದೇಶಗಳು ಯುದ್ಧಕ್ಕೆ ಸಿದ್ಧರಿರುವುದಾಗಿ ಪರಸ್ಪರ ಸವಾಲುಗಳನ್ನು ಹಾಕಿವೆ.
ಜಾಗತಿಕ ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿರುವ ಯುದ್ಧವನ್ನು ಕೊನೆಗೊಳಿಸುವ ಕುರಿತು ಎರಡನೇ ಸುತ್ತಿನ ಮಾತುಕತೆಗೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​​ಗೆ ಹಾರಾಟ ನಡೆಸಲು ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಸಿದ್ಧರಿರುವುದಾಗಿ ಶ್ವೇತಭವನ ಪ್ರಕಟಿಸಿದೆ.
ಆದರೆ, ಈ ಮಾತುಕತೆಯಲ್ಲಿ ಭಾಗಿಯಾಗುವ ಕುರಿತು ಟೆಹ್ರಾನ್​ ಅಧಿಕೃತ ಮಾಹಿತಿ ನೀಡಿಲ್ಲ. ಇರಾನಿನ ಬಂದರುಗಳಲ್ಲಿ ಅಮೆರಿಕ ದಿಗ್ಬಂಧನ ನಡೆಸುವ ಮೂಲಕ ಅಮೆರಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಎರಡು ವಾರಗಳ ಹಿಂದೆ ಪಾಕಿಸ್ತಾನದಲ್ಲಿ ನಡೆದ ಮಾತುಕತೆಗೆ ನಿಯೋಗಗಳ ನೇತೃತ್ವ ವಹಿಸಿದ್ದ ಇರಾನ್‌ನ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮಾತನಾಡಿ, ದಿಗ್ಬಂಧನ ಹೇರುವ ಮತ್ತು ಕದನ ವಿರಾಮ ಉಲ್ಲಂಘಿಸುವ ಮೂಲಕ ಟ್ರಂಪ್ ತಮಗೆ ಸೂಕ್ತವೆಂದು ತೋರುವ ಹೊಸ ಹಗೆತನವನ್ನು ಸಮರ್ಥಿಸಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಹಗೆತನದ ನೆರಳಿನ ಮಾತುಕತೆಯನ್ನು ನಾವು ಒಪ್ಪುವುದಿಲ್ಲ. ಕಳೆದ ಎರಡು ವಾರದಲ್ಲಿ ಆವು ಯುದ್ಧ ಭೂಮಿಯಲ್ಲಿ ಹೊಸ ಆಟ ತೋರಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿಯಿಲ್ಲದೆ ಮೂಲಕ ಹಾದುಹೋಗಲು ಪ್ರಯತ್ನಿಸುವ ಯಾವುದೇ ಹಡಗನ್ನು ಗುರಿಯಾಗಿಸುವುದಾಗಿ ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಎಚ್ಚರಿಸಿವೆ.ಟ್ರಂಪ್​ ಕೂಡ ಇದೇ ರೀತಿ ಆರೋಪ ಮಾಡಿದ್ದು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧಕ್ಕೆ ಪ್ರತೀಕಾರವಾಗಿ ಇರಾನ್ ಹಾರ್ಮುಜ್​ ಜಲಸಂಧಿಯನ್ನು ಮುಚ್ಚುವ ಮೂಲಕ ಹಡಗುಗಳ ಸಂಚಾರಕ್ಕೆ ಸಂಕಷ್ಟ ತಂದೊಡ್ಡುವುದರೊಂದಿಗೆ ಟೆಹ್ರಾನ್​ ಒಪ್ಪಂದ ಉಲ್ಲಂಘಿಸಿದೆ ಎಂದಿದ್ದಾರೆ.ಈ ಸಂಬಂಧ ಕೊಂಚ ಖಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಟ್ರಂಪ್​, ಈ ದಿಗ್ಬಂಧನವು ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುತ್ತಿದೆ. ಇದು ಒಪ್ಪಂದ ಆಗುವವರೆಗೂ ಕೊನೆಗೊಳ್ಳುವುದಿಲ್ಲ ಎಂದಿದ್ದಾರೆ. ಅಮೆರಿಕವು ಪರಮಾಣು ಕಾರ್ಯಕ್ರಮದ ಮೇಲೆ ಇರಾನ್ ರಿಯಾಯಿತಿಗಳಿಗಾಗಿ ಒತ್ತಾಯಿಸುತ್ತಿದೆ.ಈ ಕುರಿತು ಪಿಬಿಎಸ್​ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ, ಪಾಕಿಸ್ತಾನದಲ್ಲಿ ನಡೆಯುವ ಮಾತುಕತೆಯಲ್ಲಿ ಇರಾನ್ ಇರಬೇಕಿತ್ತು ಎಂದಿದ್ದು, ಇಸ್ಲಾಮಾಬಾದ್​ಗೆ ಹೋಗಲು ನಾವು ಒಪ್ಪಿಕೊಂಡಿದ್ದೇವೆ. ಕದನ ವಿರಾಮ ಸಮಯ ಮುಕ್ತಾಯವಾದ ಬಳಿಕ ಬಾಂಬ್​ ಸ್ಫೋಟಗೊಳ್ಳಲಿದೆ ಎಂದು ಟ್ರಂಪ್ ಪಿಬಿಎಸ್ ನ್ಯೂಸ್‌ಗೆ ತಿಳಿಸಿದರು. ಇರಾನ್​ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಇಂದು ರಾತ್ರಿ, ಟೆಹ್ರಾನ್ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ.

Leave a Reply

Your email address will not be published. Required fields are marked *

error: Content is protected !!