ಉದಯವಾಹಿನಿ, ಬಂಕುರಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಳೆ ಮತದಾನ ನಡೆಯಲಿದೆ. ಉತ್ತರ ಬಂಗಾಳದ ಎಲ್ಲಾ 152 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ಉತ್ತರ ಬಂಗಾಳದ ಮುರ್ಶಿದಾಬಾದ್, ಜರ್ಗಾಮ್, ಮೇದಿನಿಪುರೆ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್‌ಬುಮ್ ಮತದಾನ ನಡೆಯಲಿರುವ ಕ್ಷೇತ್ರಗಳು.ಮೊದಲ ಹಂತದಲ್ಲಿ 152 ಕ್ಷೇತ್ರಗಳಿದ್ದು, 1,478 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ ಅನೇಕ ಘಟಾನುಘಟಿಗಳೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಹಂತಕ್ಕೆ ಬಹಿರಂಗ ಮತಪ್ರಚಾರ ಮಂಗಳವಾರ ಮುಗಿದಿದೆ.
ಕಣದಲ್ಲಿರುವ ಘಟಾನುಘಟಿಗಳು ಇವರು: ಬಿಜೆಪಿ ನಾಯಕ ಸುವೇಂದು ಅಧಿಕಾರಿ ತಮ್ಮ ಭದ್ರಕೋಟೆಯಾದ ನಂದಿಗ್ರಾಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಭಬಾನಿಪುರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಖಾಡದಲ್ಲಿದ್ದಾರೆ. ಮಠಭಂಗದಿಂದ (ಎಸ್‌ಸಿ) ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಮತ್ತು ಖರಗ್‌ಪುರ ಸದರ್‌ನಿಂದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಚುನಾವಣೆ ಎದುರಿಸಲಿದ್ದಾರೆ. ಕಾಂಗ್ರೆಸ್‌ನಿಂದ ಅಧೀರ್ ರಂಜನ್ ಚೌಧರಿ ಬಹರಂಪುರದಿಂದ, ಮೌಸಮ್ ನೂರ್ ಮಾಲತಿಪುರದಿಂದ ಮತ್ತು ಮೃನ್ಮೋಯ್ ಸರ್ಕಾರ್ ಅಲಿಪುರ್‌ದವಾರ್ಸ್‌ನಿಂದ ಸ್ಪರ್ಧಿಸಿದ್ದಾರೆ.
ಚುನಾವಣಾಧಿಕಾರಿ ಕೇಶವ್ ಸಿನ್ಹಾ ಮೊಹಪತ್ರಾ ಅವರು ಪ್ರತಿಕ್ರಿಯಿಸಿ, ಬೂತ್ ಸಂಬಂಧಿತ ಮಾಹಿತಿ ಪಡೆಯಲು ಮತ್ತು ಸುಗಮ ಸಂವಹನ ವ್ಯವಸ್ಥೆಗೆ ಪೊಲೀಂಗ್ ಅಧಿಕಾರಿಗಳಿಗೆ ಇಸಿಐ ನೆಟ್ ಎಂಬ ಅಪ್ಲಿಕೇಷನ್ ಪರಿಚಯಿಸಲಾಗಿದೆ. ಎಲ್ಲಾ ಪೋಲಿಂಗ್ ಅಧಿಕಾರಿಗಳು ಇವಿಎಂಗಳನ್ನು ಸಂಗ್ರಹಿಸಿ, ತಮ್ಮ ಮತ ಕೇಂದ್ರಗಳಿಗೆ ತೆರಳಲಿದ್ದಾರೆ. ಮತಗಟ್ಟೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಈ ಆ್ಯಪ್ ಮೂಲಕ ಅಧಿಕಾರಿಗಳಿಗೆ ಸಿಗುತ್ತದೆ ಎಂದು ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತಗಳಲ್ಲಿ ಮತದಾನಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಸುಗಮ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಕೇಂದ್ರಗಳಲ್ಲಿ ಸಂಯೋಜಿತ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.
ಎರಡನೇ ಹಂತದ ಚುನಾವಣೆಗೆ ಏಪ್ರಿಲ್ 29ರಂದು ಮತದಾನ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.
