ಉದಯವಾಹಿನಿ, ಫರಿದಾಬಾದ್ : ವಾರದ ಹಿಂದೆ ನಾಪತ್ತೆಯಾಗಿದ್ದ 45 ವರ್ಷದ ಮಹಿಳೆಯ ಶವವೊಂದು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿದ್ದು, ಈ ಶವವನ್ನು ಎರಡು ಬೀದಿ ನಾಯಿಗಳು ಕೂಡಿಕೊಂಡು ಪತ್ತೆ ಮಾಡಿವೆ. ಫರಿದಾಬಾದ್ ಜಿಲ್ಲೆಯ ಬಲ್ಲಭಗಢ ಸಮೀಪದ ಕಾಬೂಲ್‌ಪುರ ಎಂಬ ಗ್ರಾಮದ ಮಹಿಳೆ ಎಪ್ರಿಲ್ 15 ರಿಂದ ಕಾಣೆಯಾಗಿದ್ದರು. ಕುಟುಂಬಸ್ಥರು ಸಾಕಷ್ಟು ಹುಡುಕಾಡಿದರೂ, ಆಕೆಯ ಸುಳಿವು ಸಿಕ್ಕಿರಲಿಲ್ಲ. ವಾರದ ಬಳಿಕ ವಾಸನೆ ಗ್ರಹಿಕೆ ಮೂಲಕ ಮೃತ ಮಹಿಳೆಯ ಶವವನ್ನು ನಾಯಿಗಳು ಪತ್ತೆ ಮಾಡಿವೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಹಿಳೆಯ ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಶವ ಪತ್ತೆ ಹಚ್ಚಿದ ನಾಯಿಗಳು: ಮೃತ ಮಹಿಳೆಯು ಶೇರು ಮತ್ತು ರಾಕಿ ಎಂಬ ಎರಡು ಬೀದಿ ನಾಯಿಗಳಿಗೆ ಪ್ರತಿದಿನ ಬ್ರೆಡ್-ಬನ್ ತಿನ್ನಿಸುತ್ತಿದ್ದರು. ಹಾಗಾಗಿ ಅವುಗಳು ಯಾವಾಗಲೂ ಅವರ ಮನೆಯ ಬಳಿಯೇ ಇರುತ್ತಿದ್ದವು. ಎಪ್ರಿಲ್ 18 ರಂದು, ಕುಟುಂಬಸ್ಥರು ಮಹಿಳೆಯನ್ನು ಹುಡುಕುತ್ತಿದ್ದಾಗ ಶೇರು ಮತ್ತು ರಾಕಿ ಇದ್ದಕ್ಕಿದ್ದಂತೆ ಪೊದೆಯ ಒಳಗೆ ಓಡಿಹೋಗಿ ಬೊಗಳಲು ಶುರು ಮಾಡಿದ್ದವು. ಅನುಮಾನ ಬಂದು ಅಲ್ಲಿಗೆ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ. ಪೊದೆಯ ಆಳದಲ್ಲಿ ಒಂದು ಚರಂಡಿ ಇದ್ದು, ನೀರಿನ ಅಡಿಯಲ್ಲಿ ಮಹಿಳೆಯ ಪಾದಗಳು ಗೋಚರಿಸುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರ ಸಹಾಯದಿಂದ, ಮೃತದೇಹವನ್ನು ಚರಂಡಿಯಿಂದ ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪ್ರತಿದಿನ ಬ್ರೆಡ್ ತಿನ್ನಿಸುತ್ತಿದ್ದ ಮಹಿಳೆ: ಸ್ಥಳೀಯರು ಹೇಳುವ ಪ್ರಕಾರ, ಮೃತ ಮಹಿಳೆ ಪ್ರತಿದಿನ ತನ್ನ ಕೈಯಿಂದಲೇ ಈ ಬೀದಿ ನಾಯಿಗಳಿಗೆ ಬ್ರೆಡ್ ತಿನ್ನಿಸುತ್ತಿದ್ದಳು. ಅದಕ್ಕಾಗಿಯೇ ಎರಡು ನಾಯಿಗಳು ಅವಳ ಮನೆಯ ಸುತ್ತಲೂ ವಾಸಿಸುತ್ತಿದ್ದವು. ಮನೆ ಕಾಯುತ್ತಿದ್ದವು. ಯಾರು ಅಪರಿಚಿತರು ಮನೆಯ ಬಳಿ ಬರಂದಂತೆ ನೋಡಿಕೊಳ್ಳುತ್ತಿದ್ದವು. ಈ ಘಟನೆ ಹೇಗಾಯಿತೋ ಗೊತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!