ಉದಯವಾಹಿನಿ, ಮಾಲ್ಡಾ(ಪಶ್ಚಿಮ ಬಂಗಾಳ): “ಶೇಕಡಾ 70-80ರಷ್ಟು ರಾಜಕಾರಣಿಗಳು ನೀಲಿ ಚಿತ್ರ (ಪೋರ್ನ್) ವೀಕ್ಷಿಸುತ್ತಾರೆ ಎಂದು ನಾನು ಸದನದಲ್ಲಿ ನಿಂತು ಹೇಳಿದ್ದೇನೆ. ಅದರ ಸಾಚಾತನ ಸಾಬೀತಿಗೆ ಎಲ್ಲ ರಾಜಕಾರಣಿಗಳ ಮೊಬೈಲ್ಗಳನ್ನು ಪರಿಶೀಲಿಸಿ. ನನ್ನದೂ ತಪಾಸಣೆ ನಡೆಸಿ ಎಂದಿದ್ದೆ. ರಾಜಕೀಯದಲ್ಲಿ ಮಹಿಳೆಯರ ಮೇಲೆ ವ್ಯಾಪಕ ಶೋಷಣೆ ನಡೆಯುತ್ತಿದೆ ಎಂದು ಹೇಳಿದ್ದೆ. ಪುರುಷ ರಾಜಕಾರಣಿಗಳು ಮಹಿಳೆಯರನ್ನು ಶೋಷಣೆ ಮಾಡದೆ ರಾಜಕೀಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿದ್ದೆ. ಅದರಲ್ಲಿ ತಪ್ಪೇನಿದೆ?” ಎಂದು ಪೂರ್ನಿಯಾ ಕ್ಷೇತ್ರದ ಸ್ವತಂತ್ರ ಸಂಸದ ರಾಜೇಶ್ ರಂಜನ್ (ಪಪ್ಪು ಯಾದವ್) ಕೇಳಿದ್ದಾರೆ.
ಮಹಿಳೆಯರ ಕುರಿತಾದ ತಮ್ಮ ಹೇಳಿಕೆ ವಿವಾದಿತ ಮತ್ತು ಆಕ್ಷೇಪಾರ್ಹ ಎಂದು ಪರಿಗಣಿಸಿ ಬಿಹಾರ ಮಹಿಳಾ ಆಯೋಗ ಹೊರಡಿಸಿದ ನೋಟಿಸ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ವಿರುದ್ಧ ಆಕ್ಷೇಪಣೆ ಎತ್ತಿದ ಆಯೋಗವನ್ನೇ ಪ್ರಶ್ನಿಸಿರುವ ಅವರು, “ನನಗೆ ನೋಟಿಸ್ ನೀಡಿರುವ ಈ ಜನರು ಯಾರು? ಅವರು ಯಾರ ಜೊತೆ ಇದ್ದಾರೆ? ಗಾಜಿನ ಮನೆಗಳಲ್ಲಿ ವಾಸಿಸುವ ಜನರು ಕಲ್ಲೆಸೆಯಬಾರದು” ಎಂದು ಟೀಕಿಸಿದ್ದಾರೆ.ರಾಜಕಾರಣಿಗಳ ವಿರುದ್ಧ ಕೇಸ್ ಇಲ್ಲವೇ?: “ನಾನು ಮಹಿಳೆಯರ ಶೋಷಣೆಯ ವಿರುದ್ಧ ಹೋರಾಡುತ್ತಿದ್ದೇನೆ. ಪುರುಷ ರಾಜಕಾರಣಿಗಳ ಮಹಿಳೆಯರನ್ನು ಶೋಷಿಸುತ್ತಾರೆ. ಹಲವು ಪುರುಷ ರಾಜಕಾರಣಿಗಳ ವಿರುದ್ಧ ಲೈಂಗಿಕ ಶೋಷಣೆ ಆರೋಪಗಳಿವೆ. ಈ ಕುರಿತು ಪ್ರಕರಣಗಳೂ ದಾಖಲಾಗಿವೆ. ಇಡೀ ದೇಶವೇ ಈ ವಿಷಯದಲ್ಲಿ ಕಳಂಕಿತವಾಗಿದೆ” ಎಂದು ಆರೋಪಿಸಿದರು.”ನಾನು ಪುರುಷ ರಾಜಕಾರಣಿಗಳ ವಿರುದ್ಧ ಮಾತನಾಡಿದರೆ ಮಹಿಳಾ ಆಯೋಗ ಏಕೆ ತೊಂದರೆಗೊಳಗಾಯ್ತು” ಎಂದು ಪಪ್ಪು ಯಾದವ್ ಪ್ರಶ್ನಿಸಿದ್ದಾರೆ. ಜೊತೆಗೆ, ತಮ್ಮ ಹೇಳಿಕೆಗಳನ್ನು ಮಹಿಳಾ ಪ್ರಾತಿನಿಧ್ಯದ ಕುರಿತು ನಡೆಯುತ್ತಿರುವ ರಾಜಕೀಯ ಚರ್ಚೆಗೆ ಲಿಂಕ್ ಮಾಡಿ, “ಈ ರಾಜಕಾರಣಿಗಳು ಮಹಿಳೆಯರನ್ನು ಶೋಷಿಸುತ್ತಾರೆ. ನಂತರ ಅವರೇ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಮಾತನಾಡುತ್ತಾರೆ” ಎಂದು ಛೇಡಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರಾಜಕೀಯದಲ್ಲಿ ಕೆಲಸ ಮಾಡುವ ಶೇಕಡಾ 90ರಷ್ಟು ಮಹಿಳೆಯರು ರಾಜಕಾರಣಿಗಳ ಕೋಣೆಗೆ ಪ್ರವೇಶಿಸದೆ ರಾಜಕೀಯ ಕ್ಷೇತ್ರಕ್ಕೆ ಬರಲು ಸಾಧ್ಯವಿಲ್ಲ” ಎಂದು ತೀವ್ರ ವಿವಾದಿತ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಿಹಾರ ಮಹಿಳಾ ಆಯೋಗ, ನೋಟಿಸ್ ಜಾರಿ ಮಾಡಿದೆ. ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ಏಕೆ ನೀಡಿದ್ದೀರಿ. ನಿಮ್ಮ ಸಂಸದೀಯ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಲೋಕಸಭಾ ಸ್ಪೀಕರ್‌ಗೆ ಏಕೆ ಶಿಫಾರಸು ಮಾಡಬಾರದು ಎಂಬುದಕ್ಕೆ ನೋಟಿಸ್ ಸ್ವೀಕರಿಸಿದ ಮೂರು ದಿನಗಳಲ್ಲಿ ಲಿಖಿತ ಸ್ಪಷ್ಟನೆ ನೀಡುವಂತೆ ಸೂಚಿಸಿದೆ.
