ಉದಯವಾಹಿನಿ, ತಿರುಪತಿ(ಆಂಧ್ರ ಪ್ರದೇಶ): ತಿರುಪತಿ ಜಿಲ್ಲೆಯಾದ್ಯಂತ ತೀವ್ರ ಆತಂಕಕಾರಿ ಘಟನೆಯೊಂದು ಆಘಾತದ ಅಲೆಗಳನ್ನೆಬ್ಬಿಸಿದೆ. ಇಲ್ಲಿ ಕೆಲವೇ ಗಂಟೆಗಳಲ್ಲಿ ಐದು ಜನರ ಇಡೀ ಕುಟುಂಬವೇ ಸಾವನ್ನಪ್ಪಿದೆ. ನಾರಾಯಣವನಂನಲ್ಲಿ ನಡೆದ ಭಯಾನಕ ಘಟನೆಗಳು ಸ್ಥಳೀಯರು ಮತ್ತು ಅಧಿಕಾರಿಗಳನ್ನೂ ಉತ್ತರವಿಲ್ಲದ ಪ್ರಶ್ನೆಗಳೊಂದಿಗೆ ಹೋರಾಡುವಂತೆ ಮಾಡಿದೆ.
ಪತ್ನಿ, ತಾಯಿಯ ಕೊಲೆ: ವೆಂಕಟಕೃಷ್ಣಪಲೆಂ ಪಂಚಾಯತ್‌ ವ್ಯಾಪ್ತಿಯ ನಿವಾಸಿ ಮೋಹನ್ ಅವರು ತನ್ನ ತಾಯಿ ಚಂದ್ರಕಲಾ (65) ಮತ್ತು ಪತ್ನಿ ಹರಿತಾ (33) ಅವರನ್ನು ಮನೆಯಲ್ಲಿ ಕತ್ತು ಹಿಸುಕಿ ಕೊಂದಿದ್ದಾರೆ.
ಹರಿತಾ ಅವರ ಸಹೋದರನೂ ಇವರೊಂದಿಗೆ ವಾಸವಿದ್ದು, ಮೋಹನ್ ಎಂದಿನಂತೆ ಮನೆಗೆ ಹಿಂತಿರುಗದ ಕಾರಣ ಕರೆ ಮಾಡಿದ್ದಾರೆ. ಆಗ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಹೀಗಾಗಿ, ಅನುಮಾನಗೊಂಡು ಮನೆ ಪರಿಶೀಲಿಸಿದಾಗ ಇಬ್ಬರ ಶವ ಕಂಡು ಶಾಕ್ ಆಗಿದ್ದಾರೆ.

ಇದಕ್ಕೂ ಮುನ್ನ, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಪುತ್ತೂರಿನ ಖಾಸಗಿ ಶಾಲೆಗೆ ಭೇಟಿ ನೀಡಿದ್ದ ಮೋಹನ್, ಕುಟುಂಬದ ಸದಸ್ಯರೊಬ್ಬರು ನಿಧನರಾಗಿದ್ದಾರೆ ಎಂದು ಸಿಬ್ಬಂದಿಗೆ ತಿಳಿಸಿ, ತನ್ನ ಮಕ್ಕಳಾದ ಕೌಶಿಕ್ (14) ಮತ್ತು ಹರಿಣಿ (12) ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

ಇತ್ತ ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿ, ತಾಂತ್ರಿಕ ಕಣ್ಗಾವಲಿನ ಮೂಲಕ ಆತನ ಚಲನವಲನಗಳನ್ನು ಪತ್ತೆ ಹಚ್ಚಲು ಶುರು ಮಾಡಿದ್ದರು. ಸಂಜೆಯ ಹೊತ್ತಿಗೆ ಮೋಹನ್ ಪುತ್ತೂರು ತಾಲೂಕಿನ ವೇಪಗುಂಟ ಬಳಿಯ ರೈಲ್ವೆ ಹಳಿಯ ಬಳಿ ಹೋಗಿದ್ದಾರೆ. ನಂತರ ರೈಲಿಗೆ ತಲೆಕೊಟ್ಟು ಮಲಗಿದ್ದಾರೆ.

ತಂದೆಯನ್ನು ಸಾವಿನಿಂದ ಪಾರು ಮಾಡಲು ಯತ್ನಿಸಿ, ಸಾವನ್ನಪ್ಪಿದ ಪುಟಾಣಿಗಳು: ಈ ಸಂದರ್ಭದಲ್ಲಿ ಅಪಾಯ ಅರಿತ ಮಕ್ಕಳು ತಂದೆಯನ್ನು ರೈಲ್ವೆ ಹಳಿಯಿಂದ ವಾಪಸ್ ಬರುವಂತೆ ಬೇಡಿಕೊಂಡಿದ್ದಾರೆ. ಅವರನ್ನು ಉಳಿಸುವ ನಿಟ್ಟಿನಲ್ಲಿ ದೂರಕ್ಕೆ ಎಳೆಯಲೂ ಪ್ರಯತ್ನಿಸಿದ್ದಾರೆ. ಅದೇ ಕ್ಷಣದಲ್ಲಿ ವೇಗವಾಗಿ ಬಂದ ಎಗ್ಮೋರ್-ಕಾಚೆಗುಡ ಎಕ್ಸ್‌ಪ್ರೆಸ್ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ. ತಕ್ಷಣವೇ ಮೂವರ ಪ್ರಾಣಪಕ್ಷಿಯೂ ಹಾರಿ ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪ್ರಾಥಮಿಕ ತನಿಖೆಯ ಅಂಶಗಳನ್ನು ಆಧರಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ. “ಮೋಹನ್‌ಗೆ ಯಾವುದೇ ಆರ್ಥಿಕ ಒತ್ತಡ ಅಥವಾ ಕೌಟುಂಬಿಕ ವಿವಾದಗಳು ಇರಲಿಲ್ಲ. ಸಾಯುವುದಕ್ಕೂ ಮುನ್ನ ತನ್ನ ಸಹೋದರಿಯೊಬ್ಬರ ಸಾಲ ಮರುಪಾವತಿಸಲು ಹಣದ ವ್ಯವಸ್ಥೆ ಮಾಡಿಕೊಂಡಿದ್ದ” ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಹೀಗಾಗಿ, ಆತನ ನಡೆ ನಿಗೂಢವಾಗಿದೆ.ನಾರಾಯಣವನಂ ಪೊಲೀಸರು ಜೋಡಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ರೈಲ್ವೆ ಪೊಲೀಸರು ಹಳಿಗಳ ಮೇಲಿನ ಸಾವುಗಳ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!