ಉದಯವಾಹಿನಿ, ಗದಗ: ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಆರಂಭವಾಗಿದೆ. ಜಿಲ್ಲೆಯ ಪ್ರಮುಖ ಪಟ್ಟಣಗಳಾದ ಗಜೇಂದ್ರಗಡ, ನರೇಗಲ್, ಲಕ್ಷ್ಮೇಶ್ವರ, ಮುಳಗುಂದ, ನರಗುಂದ ಹಾಗೂ ಶಿರಹಟ್ಟಿಯಲ್ಲಿ ಈಗಾಗಲೇ ನೀರಿನ ಅಭಾವ ತಲೆದೋರಿದ್ದು ಸಾರ್ವಜನಿಕರು ನೀರಿಗೂ ಪರದಾಡುವಂತಾಗಿದೆ. ಪ್ರಸ್ತುತ ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ 15 ರಿಂದ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ ಮಧ್ಯಭಾಗದ ನಂತರ ಈ ಸಮಸ್ಯೆ ಇನ್ನೂ ಉಲ್ಬಣಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯ (IMD) ಮುನ್ಸೂಚನೆಯಂತೆ ಈ ಬಾರಿ ಉಷ್ಣಾಂಶವು ಸರಾಸರಿಗಿಂತ 2°C ನಿಂದ 4°C ವರೆಗೆ ಹೆಚ್ಚಾಗಲಿದ್ದು, ಇದು ನೀರಿನ ಆವಿಯಾಗುವಿಕೆ ಮತ್ತು ಬಳಕೆಯನ್ನು ಹೆಚ್ಚಿಸಲಿದೆ.
ಜಿಲ್ಲಾಡಳಿತದ ಅಂಕಿಅಂಶಗಳ ಪ್ರಕಾರ, ಜಿಲ್ಲೆಯ ಸುಮಾರು 76 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗುವ ಲಕ್ಷಣಗಳಿವೆ. ಹಲವು ಕಡೆಗಳಲ್ಲಿ ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಜಲಕ್ಷಾಮ ದಟ್ಟವಾಗುತ್ತಿದೆ. ತುಂಗಭದ್ರಾ, ಮಲಪ್ರಭಾ ನದಿಯ ಕಾಲುವೆ ಮೂಲಕ ಗ್ರಾಮೀಣ ಭಾಗಕ್ಕೆ ನೀರು ಹರಿದರೂ ಕುಡಿಯುವ ನೀರು ಸರಿಯಾಗಿ ಪೂರೈಕೆ ಆಗುತ್ತಿಲ್ಲ. ರೋಣ – ನರಗುಂದ ಭಾಗಕ್ಕೆ ರೇಣುಕಾ ಜಲಾಶಯದಿಂದ ನೀರು ಪೂರೈಸಲಾಗುತ್ತಿದೆ. ನಿತ್ಯ 26 MLD ನೀರಿನ ಅಗತ್ಯವಿದ್ದರೂ, ಸದ್ಯ ಕೇವಲ 16 ರಿಂದ 20 MLD ಮಾತ್ರ ಪೂರೈಕೆಯಾಗುತ್ತಿದೆ. ನರಗುಂದದ 18 ಜನವಸತಿ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಇಲ್ಲಿ ‘ತಹಲ್’ ಕಂಪನಿ ನಿರ್ವಹಣೆ ಜವಾಬ್ದಾರಿ ಹೊತ್ತಿದೆ.
