ಉದಯವಾಹಿನಿ, ನವದೆಹಲಿ: ರಾಜ್ಯಸಭೆಯಲ್ಲಿನ ಆಮ್ ಆದ್ಮಿ ಪಕ್ಷ(ಎಎಪಿ)ದ ಮೂರನೇ ಎರಡರಷ್ಟು ಸದಸ್ಯರು ಭಾರತದ ಸಂವಿಧಾನದ ನಿಬಂಧನೆಗಳನ್ನು ಬಳಸಿಕೊಂಡು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಘೋಷಿಸಿದರು.
ಎಎಪಿಯ ಹರ್ಭಜನ್ ಸಿಂಗ್ ಮತ್ತು ಸ್ವಾತಿ ಮಲಿವಾಲ್, ಹಿರಿಯ ಸಂಸದರಾದ ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಬಿಜೆಪಿ ಸೇರುತ್ತಿರುವುದಾಗಿ ಅವರು ತಿಳಿಸಿದರು.
ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಉ ದ್ದೇಶಿಸಿ ಮಾತನಾಡಿದ ಅವರು, “ನನ್ನ ಜೀವನದ 15 ವರ್ಷಗಳನ್ನು ನಾನು ಎಎಪಿಗೆ ನೀಡಿದೆ. ಈಗ ಪಕ್ಷ ಪ್ರಾಮಾಣಿಕ ರಾಜಕೀಯದಿಂದ ದೂರ ಸರಿದಿದೆ. ನಾನು ಆ ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿ. ನಾನು ಪಕ್ಷದಿಂದ ದೂರ ಸರಿದು ಜನರಿಗೆ ಹತ್ತಿರವಾಗುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಭರವಸೆ ನೀಡಿ ದೆಹಲಿಯಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷವು ಪ್ರಾಮಾಣಿಕ ರಾಜಕೀಯದಿಂದ ದೂರ ಸರಿಯುತ್ತಿದೆ. ರಾಜ್ಯಸಭೆಯಲ್ಲಿ ಎಎಪಿಯ ಸುಮಾರು ಮೂರನೇ ಎರಡರಷ್ಟು ಸಂಸದರು ಬಿಜೆಪಿ ಸೇರಲಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ರಾಜ್ಯಸಭಾ ಸಚಿವಾಲಯಕ್ಕೂ ಮಾಹಿತಿ ನೀಡಿದ್ದೇವೆ. ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ 10 ಸಂಸದರಿದ್ದಾರೆ, ಅವರಲ್ಲಿ ಮೂರನೇ ಎರಡರಷ್ಟು ಮಂದಿ ನಮ್ಮೊಂದಿಗಿದ್ದಾರೆ. ಅವರು ಸಹಿ ಮಾಡಿದ್ದಾರೆ ಮತ್ತು ಇಂದು ಬೆಳಗ್ಗೆ ನಾವು ಸಹಿ ಮಾಡಿದ ಪತ್ರ, ದಾಖಲೆಗಳನ್ನು ರಾಜ್ಯಸಭಾ ಸಭಾಪತಿಗೆ ಸಲ್ಲಿಸಿದ್ದೇವೆ. ಅವರಲ್ಲಿ ಮೂವರು ನಿಮ್ಮ ಮುಂದೆ ಇದ್ದಾರೆ. ಇದಲ್ಲದೆ ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ವಿಕ್ರಮ್ ಸಾಹ್ನಿ ಮತ್ತು ಸ್ವಾತಿ ಮಲಿವಾಲ್ ಮೂರನೇ ಎರಡರಷ್ಟು ಮಂದಿಯಲ್ಲಿ ಸೇರಿದ್ದಾರೆ ಎಂದರು.
ನಾನು ಪಕ್ಷದ ಚಟುವಟಿಕೆಗಳಿಂದ ದೂರವಿರುವುದಕ್ಕೆ ನಿಜವಾದ ಕಾರಣವನ್ನು ನಿಮಗೆ ಹೇಳುತ್ತಿದ್ದೇನೆ. ನಾನು ಅವರ ಅಪರಾಧಗಳಲ್ಲಿ ಭಾಗವಾಗಲು ಬಯಸಲಿಲ್ಲ. ನಾನು ಅವರ ಅಪರಾಧಗಳಲ್ಲಿ ಭಾಗಿಯಾಗಿಲ್ಲದ ಕಾರಣ ಅವರ ಸ್ನೇಹಕ್ಕೆ ಅರ್ಹನಾಗಿರಲಿಲ್ಲ. ನಮಗೆ ಕೇವಲ ಎರಡು ಆಯ್ಕೆಗಳಿದ್ದವು. ಒಂದು ರಾಜಕೀಯವನ್ನು ಮತ್ತು ಕಳೆದ 15-16 ವರ್ಷಗಳಲ್ಲಿ ನಾವು ಮಾಡಿದ ಸಾರ್ವಜನಿಕ ಸೇವಾ ಕೆಲಸವನ್ನು ತ್ಯಜಿಸುವುದು. ಮತ್ತೊಂದು ಸಕಾರಾತ್ಮಕ ರಾಜಕೀಯ ಮಾಡಲು ನಮ್ಮ ಶಕ್ತಿ ಮತ್ತು ಅನುಭವವನ್ನು ಬಳಸಿಕೊಳ್ಳುವುದು. ಆದ್ದರಿಂದ, ನಾವು ಭಾರತದ ಸಂವಿಧಾನದ ನಿಬಂಧನೆಗಳನ್ನು ಬಳಸಿಕೊಂಡು ರಾಜ್ಯಸಭೆಯಲ್ಲಿ ಎಎಪಿಯ ಮೂರನೇ ಎರಡರಷ್ಟು ರಾಜ್ಯಸಭಾ ಸದಸ್ಯರು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
