ಉದಯವಾಹಿನಿ, ತಿರುವನಂತಪುರಂ(ಕೇರಳಂ): ಕೇರಳದಲ್ಲಿ ಬಿಸಿಲ ಬೇಗೆ ಏರುತ್ತಿದೆ. ನೆತ್ತಿ ಸುಡುವ ಸೂರ್ಯನಿಂದ ಆಗುವ ಅನಾಹುತಗಳನ್ನು ತಪ್ಪಿಸಿಕೊಳ್ಳಲು ಜನರು ಸ್ವಯಂ ಲಾಕ್​ಡೌನ್​ಗೆ ಒಳಗಾಗುವಂತೆ ಕೇರಳ ಸಿಎಂ ಪಿಣರಾಯ್​ ವಿಜಯನ್​ ಶುಕ್ರವಾರ ಕರೆ ನೀಡಿದರು. ಜನರು ಬೆಳಗ್ಗೆ 11ರಿಂದ 3ರ ನಡುವೆ ವಿಶೇಷ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ರಾಜ್ಯದ ಪಾಲಕ್ಕಾಡ್​, ಕೊಲ್ಲಂ ಮತ್ತು ತ್ರಿಶೂರ್​ ಜಿಲ್ಲೆಗಳಲ್ಲಿ ಶಾಖದಲೆಯ ಎಚ್ಚರಿಕೆಯನ್ನು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ನೀಡಿತ್ತು.
ಈ ಮೂರು ಜಿಲ್ಲೆಗಳಲ್ಲಿ ತಾಪಮಾನ ಏರುತ್ತಿದ್ದು, 40 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ವರದಿಯಾಗಿದೆ. ಹೆಚ್ಚಿನ ಒಣಹವೆಯಿಂದಾಗಿ, ಶಾಖದ ಪರಿಣಾಮವೂ ಹೆಚ್ಚಲಿದೆ. ಉಳಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಜನರು ತಮ್ಮ ಆರೋಗ್ಯ ಸುರಕ್ಷತೆಯ ಬಗ್ಗೆ ಸ್ವಯಂ ಕಾಳಜಿಗೆ ಮುಂದಾಗಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ.

ಏಪ್ರಿಲ್ 23 ಮತ್ತು 24ರಂದು ಕೇರಳದ ಪ್ರತ್ಯೇಕ ಪ್ರದೇಶಗಳಲ್ಲಿ ಶಾಖದಲೆಯ ಪರಿಸ್ಥಿತಿಯ ಬಗ್ಗೆ ಐಎಂಡಿ ಎಚ್ಚರಿಸಿದೆ. ಇದರ ಜೊತೆಗೆ, ಏಪ್ರಿಲ್ 27ರವರೆಗೆ ತಮಿಳುನಾಡು, ಆಂಧ್ರಪ್ರದೇಶ ಕರಾವಳಿ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿ ಮತ್ತು ಆರ್ದ್ರ ಹವಾಮಾನ ಮುಂದುವರೆಯಲಿದೆ ಎಂದು ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕರು ಶಾಖಕ್ಕೆ ಮೈಯೊಡ್ಡಿಕೊಳ್ಳುವುದನ್ನು ತಪ್ಪಿಸಬೇಕು. ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳಲು ಒಆರ್​ಎಸ್​​ ಅಥವಾ ಲಸ್ಸಿ ಮತ್ತು ಮಜ್ಜಿಗೆಯಂತಹ ಮನೆಯಲ್ಲಿ ತಯಾರಿಸಿದ ಪಾನೀಯಗಳನ್ನು ಬಳಸುವಂತೆ ಐಎಂಡಿ ಸಲಹೆ ನೀಡಿದೆ.

ಏಪ್ರಿಲ್ 23ರಿಂದ 27ರವರೆಗೆ ಕೇರಳ ಮತ್ತು ಕರ್ನಾಟಕದಲ್ಲಿ ಗಾಳಿ ಗಂಟೆಗೆ 30- 50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ರೀತಿಯ ಹವಾಮಾನವನ್ನು ಏಪ್ರಿಲ್ 25ರವರೆಗೆ ಆಂಧ್ರಪ್ರದೇಶದ ಕರಾವಳಿ ಮತ್ತು ಯಾನಂನಲ್ಲಿ ನಿರೀಕ್ಷಿಸಲಾಗಿದೆ.

 

Leave a Reply

Your email address will not be published. Required fields are marked *

error: Content is protected !!