ಉದಯವಾಹಿನಿ, ಕಬೀರ್ಧಾಮ್(ಛತ್ತೀಸ್‌ಗಢ): ತನ್ನ ಅನಾರೋಗ್ಯಪೀಡಿತ ಪತ್ನಿಯ ಚಿಕಿತ್ಸೆಗೆ ಧನಸಹಾಯ ಮಾಡುವಂತೆ ಅಸಹಾಯಕ ಪತಿಯೊಬ್ಬ ಊರೂರು ಅಲೆಯುತ್ತಿದ್ದಾರೆ. ಛತ್ತೀಸ್‌ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಇಂಥದ್ದೊಂದು ಹೃದಯವಿದ್ರಾವಕ ದೃಶ್ಯ ಕಂಡುಬಂದಿದೆ.
ನಾಗವಾಹಿ ಗ್ರಾಮದ ನಿವಾಸಿ ಸಮ್ಲು ಮಾರ್ಕಮ್ ಎಂಬವರು ಪತ್ನಿಯ ಚಿಕಿತ್ಸೆಗೆ ಹಣಕಾಸು ನೆರವು ನೀಡುವಂತೆ ಮನವಿ ಮಾಡುತ್ತಿದ್ದಾರೆ. ಇದಕ್ಕಾಗಿ ತನ್ನ ಬೈಕ್‌ ಅನ್ನು ಕೊಂಚ ಬದಲಿಸಿಕೊಂಡಿರುವ ಅವರು, ಅದರ ಹಿಂದೆ ಮಂಚ ಕಟ್ಟಿ ಪತ್ನಿಯನ್ನು ಮಲಗಿಸಿಕೊಂಡೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡುತ್ತಿದ್ದಾರೆ. ಇದೇ ರೀತಿ ಇವರು ನೂರಾರು ಕಿಲೋ ಮೀಟರ್ ಪ್ರಯಾಣಿಸಿರುವ ಮಾಹಿತಿ ಲಭ್ಯವಾಗಿದೆ.

“ಕಳೆದ ಎರಡು ಕೆಲವು ವರ್ಷಗಳಿಂದ ಪತ್ನಿ ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಳೆ. ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ನನ್ನ ಬಳಿಯಿದ್ದ ಸ್ವಂತ ಭೂಮಿ, ಮನೆ, ಆಭರಣಗಳನ್ನೂ ಮಾರಾಟ ಮಾಡಿದ್ದೇನೆ. ಸಾಲ ಮಾಡಿದ್ದೇನೆ. ಪತ್ನಿ ಜೀವವನ್ನು ಹೇಗಾದರೂ ಮಾಡಿ ಉಳಿಸಬೇಕಿದೆ. ಇದಕ್ಕಾಗಿ ಕಂಡ ಕಂಡ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದೇನೆ. ಆಕೆಯ ಚಿಕಿತ್ಸೆಗೆ ಸಹಾಯ ಸಿಗಬಹುದು ಎಂಬುದು ನನ್ನ ನಿರೀಕ್ಷೆ. ಉತ್ತಮ ಚಿಕಿತ್ಸೆ ನೀಡಲು ಹೀಗೆ ಆಕೆಯನ್ನು ಮಲಗಿಸಿಕೊಂಡು ಮುಂಬೈಗೂ ಪ್ರಯಾಣ ಬೆಳೆಸಿದ್ದೆ. ಆದರೆ, ಯಾವುದೇ ಪರಿಹಾರ ಸಿಗಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು ಅಲ್ಲಿಂದ ಬರಿಗೈಯಲ್ಲಿ ಹಾಗೆಯೇ ಹಳ್ಳಿಗೆ ಬಂದೆ. ಆಯುರ್ವೇದ ಚಿಕಿತ್ಸೆಯನ್ನೂ ಕೊಡಿಸಿದ್ದೇನೆ. ಆದರೆ, ಅವಳ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ನನ್ನ ಪತ್ನಿಯ ಚಿಕಿತ್ಸೆಗೆ ಯಾರಾದರೂ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ ಎಂಬ ಭರವಸೆಯೊಂದಿಗೆ ನಾನು ಹೋರಾಡುತ್ತಿದ್ದೇನೆ” ಎಂದು ಕಣ್ಣೀರು ಸುರಿಸಿದರು.

“ಇನ್ನು ಮಾರಾಟ ಮಾಡಲು ನನ್ನಲ್ಲಿ ಏನೂ ಉಳಿದಿಲ್ಲ ಆದರೆ, ಆಕೆ ಆರೋಗ್ಯವಾಗಬೇಕು. ಅವಳ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದೇನೆ. ಸುಡುವ ಬಿಸಿಲಿನಲ್ಲಿ ಬೈಕ್‌ನಲಲ್ಲಿ ಕವರ್ಧಾ ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಹೋಗಿದ್ದೆ. ಜಿಲ್ಲಾಧಿಕಾರಿಯನ್ನು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ನನ್ನ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ವಿವರಿಸಿದೆ. ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ತಮ್ಮ ಪರಿಸ್ಥಿತಿಯನ್ನು ಗಮನಿಸಿದ ಅಧಿಕಾರಿಗಳು, ತಕ್ಷಣ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಿದರು. ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ” ಎಂದು ಮಾರ್ಕಮ್ ಹೇಳಿಕೊಂಡರು.

Leave a Reply

Your email address will not be published. Required fields are marked *

error: Content is protected !!