ಉದಯವಾಹಿನಿ, ಪಾಟ್ನಾ(ಬಿಹಾರ): ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ನೇತೃತ್ವದ ಎನ್‌ಡಿಎ ಸರ್ಕಾರ ಇಂದು ವಿಧಾನಸಭೆಯ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಒಂದು ದಿನದ ಮಟ್ಟಿಗೆ ಕರೆಯಲಾದ ವಿಶೇಷ ಅಧಿವೇಶನದಲ್ಲಿ ಸರ್ಕಾರ ವಿಶ್ವಾಸಮತ ಸಾಬೀತುಪಡಿಸಿತು.
243 ಸದಸ್ಯ ಬಲದ ಸದನದಲ್ಲಿ ಧ್ವನಿ ಮತದ ಮೂಲಕ ನಿರ್ಣಯವನ್ನು ಪಾಸ್ ಮಾಡಲಾಯಿತು. ವಿಶ್ವಾಸಮತ ಗೆಲ್ಲಲು ಸರ್ಕಾರಕ್ಕೆ 122 ಮತಗಳು ಬೇಕಿದ್ದವು. ಆದರೆ, ಎನ್‌ಡಿಎ 201 ಮತಗಳನ್ನು ಹೊಂದಿದ್ದು, ಸಂಪೂರ್ಣ ಬೆಂಬಲ ದೊರೆಯಿತು. ಈ ಸಂದರ್ಭದಲ್ಲಿ ಸದನ ಉದ್ದೇಶಿಸಿ ಮಾತನಾಡಿದ ಸಿಎಂ ಚೌಧರಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ನಿತೀಶ್ ಕುಮಾರ್ ಪ್ರಾರಂಭಿಸಿದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಎನ್‌ಡಿಎ ಸರ್ಕಾರ ಮುಂದುವರಿಸಲಿದೆ ಎಂದಿರುವ ಅವರು, ಅಪರಾಧ, ಭ್ರಷ್ಟಾಚಾರ ಮತ್ತು ಕೋಮುವಾದ ಎಂಬ ಮೂರು ಸಿಗಳೊಂದಿಗೆ ಯಾವುದೇ ರಾಜಿ ಇಲ್ಲದೆ ಆಡಳಿತ ನಡೆಸುವ ಭರವಸೆ ನೀಡಿದರು. ವಿಪಕ್ಷ ನಾಯಕ ಆರ್ಜೆಡಿಯ ತೇಜಸ್ವಿ ಪ್ರಸಾದ್ ಮಾತನಾಡಿ, ಕಳೆದ ಆರು ತಿಂಗಳ ಹಿಂದೆ ಅಂದರೆ, 2025ರ ನವೆಂಬರ್ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇವರನ್ನು ತಮ್ಮ ಅಭ್ಯರ್ಥಿಯಾಗಿ ಘೋಷಿಸಿದ್ದರೆ, ಈ ಅಧಿವೇಶನ ನಡೆಸುವ ಅಗತ್ಯವೇ ಇರುತ್ತಿರಲಿಲ್ಲ. ಐದು ವರ್ಷಗಳಲ್ಲಿ ರಾಜ್ಯದಲ್ಲಿನ ಐದನೇ ಸರ್ಕಾರ ಇದು. ಎನ್‌ಡಿಎ 20 ವರ್ಷಗಳ ಆಳ್ವಿಕೆಯ ಹೊರತಾಗಿ ಈ ರೀತಿಯ ಪವಾಡ ಸಂಭವಿಸಿರುವುದು ಅಚ್ಚರಿಯಾಗಿದೆ. ಚುನಾಯಿತ ಸಿಎಂ ಅನ್ನು ಬದಲಾಯಿಸಿ, ಸಾಮ್ರಾಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟೀಕಿಸಿದರು. ರಾಜ್ಯಸಭೆಗೆ ಆಯ್ಕೆಯಾದ ಕಾರಣಕ್ಕೆ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದು, ಅವರ ನಂತರ ಸಾಮ್ರಾಟ್ ಚೌಧರಿ ಅವರನ್ನು ಎನ್‌ಡಿಎ ಸರ್ಕಾರದ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿತ್ತು. ಏಪ್ರಿಲ್ 15ರಂದು ಚೌಧರಿ ರಾಜ್ಯದ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜೆಡಿಯು ನಾಯಕರಾದ ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಪ್ರಸಾದ್ ಯಾದವ್ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.
