ಉದಯವಾಹಿನಿ, ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಸ್ತ್ರೀಯರಿಗೆ ಪ್ರವೇಶ ಅವಕಾಶ ಕುರಿತು ಇಂದಿನ (ಗುರುವಾರ) ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿತು.ಈ ವಿಷಯವಾಗಿ ಗಣ್ಯರು, ಚಿಂತಕರು ಹಾಗೂ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ, ವಾಟ್ಸ್ ಆ್ಯಪ್ ಯೂನಿವರ್ಸಿಟಿಯಿಂದ ಬರುವ ಮಾಹಿತಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿತು.
ಧಾರ್ಮಿಕ ಸ್ವಾತಂತ್ರ್ಯ ಆಚರಣೆಗಳ ವ್ಯಾಪ್ತಿ ಹಾಗೂ ಶಬರಿಮಲೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ಎಂ.ಎಂ.ಸುಂದರೇಶ್, ಅಹ್ಸಾನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಅಗಸ್ಟೀನ್ ಜಾರ್ಜ್ ಮಸಿಹ್, ಪ್ರಸನ್ನ ಬಿ.ವರಾಲೆ, ಆರ್.ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರು ಈ ಪೀಠದಲ್ಲಿದ್ದಾರೆ.
ಕಲಾಪದ ವೇಳೆ ದಾವೂದಿ ಬೊಹ್ರಾ ಸಮುದಾಯದ ಪರವಾಗಿ ಹಿರಿಯ ವಕೀಲ ನೀರಜ್ ಕಿಶನ್ ಕೌಲ್ ವಾದ ಮಂಡಿಸಿ, ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗ ಸಂಯಮದ ಕುರಿತು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬರೆದ ಲೇಖನವನ್ನು ಉಲ್ಲೇಖಿಸಿದರು.
ಈ ವೇಳೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, “ನಾವು ಎಲ್ಲಾ ಗಣ್ಯ ವ್ಯಕ್ತಿಗಳು, ನ್ಯಾಯಶಾಸ್ತ್ರಜ್ಞರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಆದರೆ, ವೈಯಕ್ತಿಕ ಅಭಿಪ್ರಾಯವು ವೈಯಕ್ತಿಕವಾಗಿ ಉಳಿಯುತ್ತದೆ” ಎಂದರು. “ಇದಕ್ಕೆ ಪ್ರತಿಯಾಗಿ, ಜ್ಞಾನ ಮತ್ತು ಮಾಹಿತಿಯನ್ನು ಯಾವುದೇ ಮೂಲದಿಂದ ಬಂದರೂ ಸ್ವೀಕರಿಸುವುದರಲ್ಲಿ ಯಾವುದೇ ಹಾನಿ ಇಲ್ಲ” ಎಂದು ಕೌಲ್ ಹೇಳಿದರು.ಇದಕ್ಕೆ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, “ಎಲ್ಲ ಮೂಲಗಳಿಂದ ಬರುವ ಮಾಹಿತಿ ಸ್ವೀಕರಿಸಬಹುದು. ಆದರೆ, ವಾಟ್ಸ್ ಆ್ಯಪ್ ಯೂನಿವರ್ಸಿಯಿಂದ ಮಾತ್ರ ಅಲ್ಲ ಎಂದರು. ಅದಕ್ಕೆ ಕೌಲ್ ಅವರು, ಹೌದು. ಅಂತಹ ಮೂಲಗಳು ನಂಬಲು ಮತ್ತು ಮನ್ನಣೆಗೆ ಅರ್ಹವಲ್ಲ” ಎಂದರು.”ನಿರ್ದಿಷ್ಟ ಧಾರ್ಮಿಕ ಆಚರಣೆಯನ್ನು ಅಗತ್ಯ ಮತ್ತು ಅನಿವಾರ್ಯವಲ್ಲ ಎಂದು ಘೋಷಿಸಲು ನ್ಯಾಯಾಂಗದಿಂದ ಅಸಾಧ್ಯವಲ್ಲದಿದ್ದರೂ, ತುಂಬಾ ಕಷ್ಟ” ಎಂದು ಬುಧವಾರ ಸುಪ್ರೀಂ ಕೋರ್ಟ್ ಹೇಳಿತ್ತು.
