ಉದಯವಾಹಿನಿ, ಶೇಖ್‌ಪುರ(ಬಿಹಾರ): ಇಲ್ಲಿನ ಉರ್ದು ಶಾಲೆಯೊಂದರ ಶಿಕ್ಷಕರೊಬ್ಬರು ದೃಷ್ಟಿಹೀನರಾದರೂ, ಮಕ್ಕಳಿಗೆ ಪಾಠ ಹೇಳುವ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಇವರು ಸಾವಿರಾರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.
ಹೌದು. ಶೇಖ್‌ಪುರ ಜಿಲ್ಲಾ ಕೇಂದ್ರದಿಂದ 4 ಕಿಲೋ ಮೀಟರ್ ದೂರದಲ್ಲಿರುವ ಚರಿಹರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ರಾಮಾಶಿಶ್ ಕುಮಾರ್ ಅವರು ತಮ್ಮ ದೃಷ್ಟಿಹೀನತೆಯನ್ನು ಮೆಟ್ಟಿನಿಂತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಬಾಲ್ಯದಲ್ಲಿಯೇ ದೃಷ್ಟಿ ಕಳೆದುಕೊಂಡರೂ, ಶಿಕ್ಷಣದ ಮೇಲಿನ ಪ್ರೀತಿ ಮಾತ್ರ ಬಿಡಲಿಲ್ಲ.
ಶಿಕ್ಷಕ ರಾಮಾಶಿಶ್ ಅವರು ಕಳೆದ 20 ವರ್ಷಗಳಿಂದ ಬೋಧನಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೃಷ್ಟಿಹೀನತೆಯು ಅವರ ಜೀವನೋತ್ಸಾಹವನ್ನು ಕುಗ್ಗಿಸಿಲ್ಲ. ಶಾಲೆಗೆ ಬರಲು ಅವರು ನಿತ್ಯ 4 ಕಿ.ಮೀ ದೂರ ನಡೆದುಕೊಂಡು ಬರುತ್ತಾರೆ. ಈ ಶಿಕ್ಷಕ ಕೇವಲ ಪುಸ್ತಕಗಳನ್ನು ಮಾತ್ರವಲ್ಲ, ಕನಸುಗಳನ್ನೂ ವಿದ್ಯಾರ್ಥಿಗಳ ಕೈಗೆ ನೀಡುತ್ತಿದ್ದಾರೆ.
ಶೇಖ್‌ಪುರ ಜಿಲ್ಲೆಯ ದೇಹಕುಸುಂಭ ಗ್ರಾಮದ ನಿವಾಸಿಯಾದ ಶಿಕ್ಷಕ ರಾಮಾಶಿಶ್ ಕುಮಾರ್ ಸಂಪೂರ್ಣ ದೃಷ್ಟಿದೋಷ ಹೊಂದಿದ್ದಾರೆ. ಅಂದರೆ ಎರಡೂ ಕಣ್ಣು ಕಾಣುವುದಿಲ್ಲ. ತಮ್ಮ ದೌರ್ಬಲ್ಯವನ್ನೇ ಶಕ್ತಿಯಾಗಿ ಪರಿವರ್ತಿಸಿಕೊಂಡ ಅವರು, ಶಿಕ್ಷಕ ವೃತ್ತಿಯಲ್ಲಿ ಆಯ್ದುಕೊಂಡರು. ಕಣ್ಣು ಕಾಣದಿದ್ದರೂ, ಸ್ಪಷ್ಟವಾಗಿ ಪಾಠವನ್ನು ಮೌಖಿಕವಾಗಿ ಹೇಳುತ್ತಾರೆ.

ದೃಷ್ಟಿ ಕಳೆದುಕೊಂಡದ್ದು ಹೇಗೆ?: ಈಟಿವಿ ಭಾರತ್​ ಜೊತೆ ಮಾತನಾಡಿದ ಶಿಕ್ಷಕ ರಾಮಾಶಿಶ್ ಕುಮಾರ್, “ನಾನು ನನ್ನ ದೃಷ್ಟಿಯನ್ನು ಹೇಗೆ ಕಳೆದುಕೊಂಡೆ ಎಂಬುದರ ಬಗ್ಗೆ ನನಗೆ ನಿಖರವಾಗಿ ತಿಳಿದಿಲ್ಲ. ಆರನೇ ವರ್ಷದವನಿದ್ದಾಗ ಕುರುಡನಾದೆ ಎಂದು ಕುಟುಂಬಸ್ಥರು ಹೇಳುತ್ತಾರೆ. ಕೊಳಚೆ ನೀರಿನಲ್ಲಿ ಆಟವಾಡುತ್ತಿದ್ದಾಗ ಕಣ್ಣು ಕೆಂಪಾಗಿದ್ದವು. ಕೆಲವು ದಿನಗಳ ನಂತರ, ದೃಷ್ಟಿ ಕುಂದಿತು. ಆ ಸಮಯದಲ್ಲಿ ಸರಿಯಾದ ವೈದ್ಯಕೀಯ ಚಿಕಿತ್ಸೆಯ ಕೊರತೆಯಿಂದಾಗಿ, ಪೂರ್ಣವಾಗಿ ದೃಷ್ಟಿಯನ್ನು ಕಳೆದುಕೊಂಡೆ” ಎಂದರು.

“ದೃಷ್ಟಿಹೀನನಾದ ನಂತರ ನಾನು ನನ್ನ ಹಳ್ಳಿಯಲ್ಲೇ ದೀರ್ಘಕಾಲ ಉಳಿದುಕೊಂಡೆ. ಬಳಿಕ, ನನ್ನ ತಂದೆ ಪಾಟ್ನಾದಲ್ಲಿ ನನ್ನಂತಹ ಮಕ್ಕಳ ಶಿಕ್ಷಣಕ್ಕಾಗಿ ಇರುವ ಶಾಲೆಯ ಬಗ್ಗೆ ತಿಳಿದುಕೊಂಡರು. 1990ರಲ್ಲಿ, ಪಾಟ್ನಾದ ದೃಷ್ಟಿಹೀನರ ಸರ್ಕಾರಿ ಶಾಲೆಗೆ ಸೇರಿಕೊಂಡೆ. ಅಲ್ಲಿ 10ನೇ ತರಗತಿಯವರೆಗೆ ಅಧ್ಯಯನ ಮಾಡಿದೆ. ತರುವಾಯ, ವಾರಣಾಸಿಯ ದುರ್ಗಾಕುಂಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12ನೇ ತರಗತಿ ಶಿಕ್ಷಣ ಮುಗಿಸಿದೆ. ದೆಹಲಿಯ ಸತ್ಯಾವತಿ ಕಾಲೇಜಿನಿಂದ ಪದವಿ ಪಡೆದುಕೊಂಡೆ” ಎಂದು ವಿವರಿಸಿದರು.

 

Leave a Reply

Your email address will not be published. Required fields are marked *

error: Content is protected !!