ಉದಯವಾಹಿನಿ, ಬೆಂಗಳೂರು: ರಾಜ್ಯ ಸರ್ಕಾರ ಪ್ರಕಟಿಸಿರುವ ಒಳಮೀಸಲಾತಿ ನಿರ್ಧಾರವು ಕೇವಲ ಕಣ್ಣೊರೆಸು ತಂತ್ರವಾಗಿದ್ದು, ಇದರಿಂದ ದಲಿತ ಸಮುದಾಯಗಳಿಗೆ ನ್ಯಾಯ ಸಿಗುವುದಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಈ ನಿರ್ಧಾರವು ಅವೈಜ್ಞಾನಿಕವಾಗಿದ್ದು, ದಲಿತರನ್ನು ಮತ್ತಷ್ಟು ಗೊಂದಲಕ್ಕೆ ದೂಡಿದೆ ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೀಸಲಾತಿ ಅನ್ವಯವಾಗದ ಹುದ್ದೆಗಳನ್ನು ‘ಜನರಲ್ ಎಸ್‌ಸಿ’ ಎಂದು ಕರೆದರೆ ಅದು ಒಳಮೀಸಲಾತಿ ಹೇಗೆ ಆಗುತ್ತದೆ? ಇದು ಕೇವಲ ಗೊಂದಲ ಸೃಷ್ಟಿಸುವ ಪ್ರಯತ್ನ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಳಮೀಸಲಾತಿ ನೀಡಲು ಸರ್ಕಾರಕ್ಕೆ ಮೂರು ವರ್ಷ ಬೇಕಿತ್ತೇ? ಮೂರೇ ತಿಂಗಳಲ್ಲಿ ಈ ಕೆಲಸ ಮಾಡಬಹುದಿತ್ತು. Gen Z ಹೋರಾಟಗಾರರ ಒತ್ತಡ ಮತ್ತು ಆಕ್ರೋಶದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಈ ತರಾತುರಿಯ ತೀರ್ಮಾನ ಮಾಡಿದ್ದಾರೆ ಎಂದು ಟೀಕಿಸಿದರು. ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಬಂದಿರಲಿಲ್ಲ. ಈ ಒಳ ಮೀಸಲಾತಿ ಒಳಮೀಸಲಾತಿ ತೃಪ್ತಿಕರ ಆಗುವುದಿಲ್ಲ ಎನ್ನುವುದು ಅವರಿಗೆ ಗೊತ್ತಿತ್ತು. ಸಚಿವ ಮುನಿಯಪ್ಪ ಅವರಿಗೆ ‘ಸಂತೋಷದಿಂದ ಮಾತನಾಡು’ ಎಂದು ಸಿಎಂ ಹೇಳುತ್ತಿರುವುದನ್ನು ನೋಡಿದರೆ, ಕಾಂಗ್ರೆಸ್‌ನ ದಲಿತ ನಾಯಕರಿಗೇ ಈ ನಿರ್ಧಾರದ ಮೇಲೆ ತೃಪ್ತಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
