ಉದಯವಾಹಿನಿ, ಬೆಂಗಳೂರು: ರಾಜ್ಯ ರಾಜಧಾನಿಯ ಆಡಳಿತಾತ್ಮಕ ಬದಲಾವಣೆಯ ನಂತರ ಕುತೂಹಲ ಕೆರಳಿಸಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಐದು ನಗರ ಪಾಲಿಕೆಗಳ ಚುನಾವಣೆಗೆ ಈಗ ಗ್ರಹಣ ಹಿಡಿದಿದೆ. ಜೂನ್ 30ರೊಳಗೆ ಚುನಾವಣೆ ನಡೆಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಅದು ಅಸಾಧ್ಯ ಎಂದು ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಅಳಲು ತೋಡಿಕೊಂಡಿದೆ.
ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯ ಪ್ರಕಾರ, ಚುನಾವಣಾ ಪ್ರಕ್ರಿಯೆ ನಡೆಸಲು ಆಯೋಗದ ಬಳಿ ಹಣದ (Money) ಕೊರತೆ ಎದುರಾಗಿದೆ. ಇದರ ಜೊತೆಗೆ, ಬೃಹತ್ ಮಟ್ಟದ ಮತದಾನ ಪ್ರಕ್ರಿಯೆ ನಿಭಾಯಿಸಲು ಅಗತ್ಯವಿರುವ ಸಿಬ್ಬಂದಿ ಬಲವೂ ಇಲ್ಲದಿರುವುದು ಆಯೋಗವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಕ್ರಿಯ ಬೆಂಬಲ ಮತ್ತು ಅನುದಾನ ಅತ್ಯಗತ್ಯ ಎಂದು ಆಯೋಗ ತಿಳಿಸಿದೆ.
