ಉದಯವಾಹಿನಿ, ರಾಯ್ಪುರ: ಛತ್ತೀಸಗಢದಲ್ಲಿ 25 ವರ್ಷದ ಮಹಿಳೆಯೊಬ್ಬಳು ತಾನು ಸಂಬಂಧ ಹೊಂದಿದ್ದ ಕಾನ್‌ಸ್ಟೆಬಲ್‌ ಮನೆಗೆ ನುಗ್ಗಿ ಆತನ ಪತ್ನಿ ಮತ್ತು ಮೂವರು ಮಕ್ಕಳಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಆರೋಪಿ ಸರೋಜಿನಿ ಭಾರದ್ವಾಜ್ ತನ್ನ ಕುಟುಂಬದ ಊರಿಗೆ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಳು. ಬಳಿಕ ದುರ್ಗದಲ್ಲಿರುವ ಕಾನ್‌ಸ್ಟೆಬಲ್ ಲಲಿತೇಶ್ ಯಾದವ್ ಅವರ ಫ್ಲಾಟ್‌ಗೆ ಹೋದಾಗ ಈ ಘಟನೆ ನಡೆದಿದೆ.
ಸರೋಜಿನಿ ಮೊದಲು ರೀನಾ ಯಾದವ್‌ ಜೊತೆಗೆ ಜಗಳ ತೆಗೆದಳು. ಈ ವೇಳೆ ಏಕಾಏಕಿ ಚಾಕು ತೆಗೆದು ಇರಿದಿದ್ದಾಳೆ. ಹಲ್ಲೆ ನಡೆಸಿ ನಂತರ ಆಕೆಯ ಮಕ್ಕಳ ಮೇಲೂ ದಾಳಿ ಮಾಡಿದಳು. ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಆದಿತ್ಯ ಎಂಬ ಹುಡುಗನ ಮೇಲೂ ಚಾಕವಿನಿಂದ ಇರಿದಳು.
ತನ್ನ ಮಕ್ಕಳ ಮೇಲೆ ಹಲ್ಲೆ ನಡೆಸಬೇಡ ಎಂದು ರೀನಾ ಯಾದವ್‌ ಕೇಳಿಕೊಂಡರೂ ಆರೋಪಿತೆ ಕೇಳಿಲ್ಲ. ಒಬ್ಬಳು ಹುಡುಗಿ ಸ್ನಾನಗೃಹದಲ್ಲಿ ಅಡಗಿಕೊಂಡಿದ್ದಳು. ಇನ್ನೊಬ್ಬಳು ಮನೆಯಿಂದ ತಪ್ಪಿಸಿಕೊಂಡು ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ತಕ್ಷಣ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು, ಆರೋಪಿತೆ ಕೈಯಲ್ಲಿದ್ದ ರಕ್ತಸಿಕ್ತ ಚಾಕುವನ್ನು ಕಿತ್ತುಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಆರೋಪಿ ಮತ್ತು ಆಯುಧವನ್ನು ಪೊಲೀಸರ ವಶಕ್ಕೆ ನೀಡಿದರು. ಹಲ್ಲೆಯಿಂದ ಗಾಯಗೊಂಡಿದ್ದ ಕಾನ್‌ಸ್ಟೆಬಲ್‌ ಪತ್ನಿ ರೀನಾ ಯಾದವ್ ಮತ್ತು ಆಕೆಯ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ರೀನಾ ಮತ್ತು ಆಕೆಯ ಮಗ ಸಾವನ್ನಪ್ಪಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬಳ ಸ್ಥಿತಿ ಗಂಭೀರವಾಗಿದೆ.

Leave a Reply

Your email address will not be published. Required fields are marked *

error: Content is protected !!