ಉದಯವಾಹಿನಿ, ಕೋಟಾ (ರಾಜಸ್ಥಾನ): ಇತ್ತೀಚೆಗೆ ಪ್ರಕಟವಾದ ಜೆಇಇ (ಮುಖ್ಯ) ಪರೀಕ್ಷೆಯ ಫಲಿತಾಂಶದಲ್ಲಿ ಅಖಿಲ ಭಾರತ ಮಟ್ಟದಲ್ಲಿ 1ನೇ ರ‍್ಯಾಂಕ್ ಪಡೆದ ಕಬೀರ್ ಚಿಲ್ಲರ್ ಅವರು, ತಾಷ್ಕೆಂಟ್‌ನಲ್ಲಿ ನಡೆಯಲಿರುವ 2026 ರ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾಗವಹಿಸುವ ಭಾರತೀಯ ತಂಡದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿ ವ್ಯಾಪ್ತಿಯ ಗುರುಗ್ರಾಮ್ ನಿವಾಸಿಯಾದ ಕಬೀರ್ ಅವರು, ಎಪ್ರಿಲ್ 20 ರಂದು ಘೋಷಿಸಲಾದ ಜೆಇಇ ಮುಖ್ಯ ಪರೀಕ್ಷೆಯಲ್ಲಿ 300 ಕ್ಕೆ 300 ಅಂಕಗಳನ್ನು ಅಥವಾ ಪೂರ್ಣ ಶೇಕಡಾ 100 ರಷ್ಟು ಅಂಕಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯಲಿರುವ 58ನೇ ಅಂತಾರಾಷ್ಟ್ರೀಯ ರಸಾಯನಶಾಸ್ತ್ರ ಒಲಿಂಪಿಯಾಡ್ (IChO 2026) ನಲ್ಲಿ ಭಾರತವನ್ನು ಪ್ರತಿನಿಧಿಸಲು ನಾಲ್ಕು ಮಂದಿಯ ತಂಡವನ್ನು ರಚಿಸಲಾಗಿದೆ. ಅದನ್ನು ಕಬೀರ್ ಅವರು ಮುನ್ನಡೆಸಲಿದ್ದಾರೆ ಎಂದು ಹೋಮಿ ಭಾಭಾ ಸೆಂಟರ್ ಫಾರ್ ಸೈನ್ಸ್ ಎಜುಕೇಶನ್ ಪ್ರಕಟಿಸಿದೆ. ಕೇಂದ್ರದಲ್ಲಿ ನಡೆಯುತ್ತಿರುವ ಓರಿಯಂಟೇಶನ್-ಕಮ್-ಸೆಲೆಕ್ಷನ್ ಕ್ಯಾಂಪ್‌ನಲ್ಲಿ ಇದನ್ನು ಘೋಷಿಸಲಾಗಿದೆ.

ಕಬೀರ್ ಅವರ ಜೊತೆಗೆ, ಭುವನೇಶ್ವರದ ದೇವದತ್ತ ಪ್ರಿಯದರ್ಶಿ, ಪಂಜಾಬ್‌ನ ಹರ್ಷಿತ್ ಸಿಂಗ್ಲಾ ಮತ್ತು ಹೈದರಾಬಾದ್‌ನ ಸಂದೀಪ್ ಕೂಚಿ ಅವರೂ ಇರಲಿದ್ದಾರೆ. ಈ ನಾಲ್ವರು ಜುಲೈ 10 ರಿಂದ 19 ರವರೆಗೆ ನಡೆಯಲಿರುವ ತಾಷ್ಕೆಂಟ್ ಐಸಿಹೆಚ್‌ಒ 2026 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!