ಉದಯವಾಹಿನಿ, ನವದೆಹಲಿ: ದೇಶದ ಮೂರನೇ ಎರಡರಷ್ಟು ಭಾಗ ಸೂರ್ಯನ ಕಡುಕೋಪಕ್ಕೆ ಗುರಿಯಾದಂತಿದೆ. ಹಲವು ರಾಜ್ಯಗಳಲ್ಲಿ ಬಿಸಿಲು ತೀವ್ರತರವಾಗಿದ್ದು, ಜನ-ಜಾನುವಾರು ತತ್ತರಿಸುವಂತಾಗಿದೆ. ಬಿಸಿಗಾಳಿಯು ಉಸಿರಾಡುವ ಗಾಳಿಗೂ ಸಂಚಕಾರ ತಂದೊಡ್ಡಿದೆ. ಇದರಿಂದ, ಜನರು ಸಹಜವಾಗಿ ಅಸ್ವಸ್ಥತೆ ಮತ್ತು ನಿತ್ರಾಣಕ್ಕೆ ಒಳಗಾಗುತ್ತಿದ್ದಾರೆ.
ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿರುವ ಬೇಸಿಗೆಯ ಬಿಸಿಲನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಹವಾಮಾನ ಇಲಾಖೆಯು ಕೆಲ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಬಿಸಿಗಾಳಿಯ ತೀವ್ರತೆ ಹೆಚ್ಚಾಗಲಿದ್ದು, ಸಾಮಾನ್ಯಕ್ಕಿಂತ ಅಧಿಕವಿರುವ ತಾಪಮಾನದಿಂದ ರಕ್ಷಿಸಿಕೊಳ್ಳಲು ಜನರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅದು ಸೂಚಿಸಿದೆ.

ಹವಾಮಾನ ಇಲಾಖೆಯ ಪ್ರಕಾರ, ವಾಯುವ್ಯ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್​ನಿಂದ 44 ಡಿಗ್ರಿ ಸೆಲ್ಸಿಯಸ್​ವರೆಗೆ ದಾಖಲಾಗುತ್ತಿದೆ. ಮರಳುಗಾಡಿನ ನಾಡಾದ ರಾಜಸ್ಥಾನದಲ್ಲಿ ಬಿಸಿಲು ರೌದ್ರನರ್ತನ ತೋರುತ್ತಿದೆ. ಅಲ್ಲಿನ ಶ್ರೀಗಂಗಾನಗರದಲ್ಲಿ ಗರಿಷ್ಠ 44.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಇತ್ತೀಚಿಗೆ ರಾಯಚೂರು ತಾಲೂಕಿನ ದೇವಸೂಗೂರು ಗ್ರಾಮದಲ್ಲಿ 44.2 ಡಿಗ್ರಿ ಹಾಗೂ ಕಲಮಲಾ ಗ್ರಾಮದಲ್ಲಿ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕರ್ನಾಟಕದಲ್ಲೇ ಅತಿಹೆಚ್ಚು ಎಂದು ತಿಳಿದುಬಂದಿತ್ತು. ದೇಶದ ಅನೇಕ ಭಾಗಗಳಲ್ಲಿ ತಾಪಮಾನವು ವಾಡಿಕೆಗಿಂತ 5 ಡಿಗ್ರಿ ಸೆಲ್ಸಿಯಸ್​ ಹೆಚ್ಚಿದೆ. ಇದು ಸಾರ್ವಜನಿಕ ಆರೋಗ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವದ ಮೇಲೆ ತೀವ್ರ ಪರಿಣಾಮ ಬೀರಿದೆ.

ಬದಲಾಗುತ್ತಿರುವ ಹವಾಮಾನ ಸ್ಥಿತಿಗತಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2020 ರ ಎಪ್ರಿಲ್​ ತಿಂಗಳ ಈ ಅವಧಿಯಲ್ಲಿ 38 ರಿಂದ 40 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2023 ರಲ್ಲಿ 45 ರಿಂದ 47 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಅಂದರೆ, ವರ್ಷದಿಂದ ವರ್ಷಕ್ಕೆ ತಾಪಮಾನ ಏರುಗತಿಯತ್ತ ಸಾಗಿದೆ ಎಂದರ್ಥ.

ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪರಿಸರ ವಿಜ್ಞಾನಿ ಡಾ. ಹಿಸ್ಮಿ ಜಮಿಲ್ ಹುಸೇನ್, “ಎಪ್ರಿಲ್ ತಾಪಮಾನವು ಆತಂಕಕಾರಿ ಸ್ಥಿತಿಯನ್ನು ತೋರಿಸುತ್ತದೆ. 2026 ರಲ್ಲಿ ತಾಪಮಾನವು 44 ಡಿಗ್ರಿ ತಲುಪಿರುವುದು ಹವಾಮಾನದ ಮೂಲ ಬದಲಾವಣೆಯನ್ನು ಸೂಚಿಸುತ್ತದೆ. 2022 ರ ಭೀಕರ ಬಿಸಿಗಾಳಿಯಂತಹ ಪರಿಸ್ಥಿತಿ ಈಗ ಹಂಗಾಮಿನ ಆರಂಭದಲ್ಲೇ ಕಂಡುಬರುತ್ತಿದೆ” ಎಂದು ತಿಳಿಸಿದ್ದಾರೆ.

ಬಿಸಿಗಾಳಿಯು ಕೇವಲ ಪರಿಸರದ ವಿಷಯವಲ್ಲ, ಇದು ಸಾರ್ವಜನಿಕ ಆರೋಗ್ಯ, ಆರ್ಥಿಕತೆ ಮತ್ತು ಉತ್ಪಾದನಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವ ಬಹುಮುಖಿ ಬಿಕ್ಕಟ್ಟಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಮುಂದುವರಿಯುವ ಸಾಧ್ಯತೆಯಿದೆ. ಕರಾವಳಿ ಮತ್ತು ಪೂರ್ವ ರಾಜ್ಯಗಳಲ್ಲಿ ತೇವಾಂಶಭರಿತ ಸೆಖೆ ಇರಲಿದ್ದು, ಉತ್ತರ ಬಯಲು ಸೀಮೆಯಲ್ಲಿ ‘ಉಷ್ಣ ರಾತ್ರಿಗಳು’ ಕಂಡುಬರಲಿವೆ. ಅಂದರೆ ಸೂರ್ಯಾಸ್ತದ ನಂತರವೂ ತಾಪಮಾನ ಕಡಿಮೆ ಆಗದಿರುವುದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಇದರ ಹವಾಮಾನ ಇಲಾಖೆಯು ಕೆಲಸ ಸಲಹೆಗಳನ್ನು ನೀಡಿದೆ.

Leave a Reply

Your email address will not be published. Required fields are marked *

error: Content is protected !!