ಉದಯವಾಹಿನಿ, ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಬೇಕಿರುವ ಒಂದು ಪ್ರಮುಖ ಖನಿಜ. ಕ್ಯಾಲ್ಸಿಯಂ ನಮ್ಮ ಮೂಳೆಗಳು ಹಾಗೂ ಹಲ್ಲುಗಳನ್ನು ಬಲವಾಗಿಡುವುದಲ್ಲದೆ, ರಕ್ತದೊತ್ತಡ ನಿಯಂತ್ರಿಸುವಲ್ಲಿ ಮತ್ತು ಸ್ನಾಯುಗಳ ಕಾರ್ಯ ಬೆಂಬಲಿಸುವ ಹಾಗೂ ನರ ಸಂಕೇತ ಪ್ರಸರಣವನ್ನು ಸುಗಮಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದರ ಪರಿಣಾಮವಾಗಿ ದೇಹವು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದರೆ ಇದು ದುರ್ಬಲ ಮೂಳೆಗಳಿಗೆ ಕಾರಣವಾಗುತ್ತದೆ ಹಾಗೂ ಇತರ ಹಲವಾರು ಆರೋಗ್ಯ ಸಮಸ್ಯೆಗಳ ಹೊರಹೊಮ್ಮುವಿಕೆಗೆ ಕಾರಣವಾಗುತ್ತದೆ. ಕೆಲವು ರೀತಿಯ ಆಹಾರಗಳು ದೇಹದ ಕ್ಯಾಲ್ಸಿಯಂ ಮಟ್ಟ ಕಡಿಮೆ ಮಾಡುತ್ತದೆ. ಇದರಿಂದಾಗಿ ಮೂಳೆಗಳು ಮತ್ತಷ್ಟು ದುರ್ಬಲಗೊಳ್ಳುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.
ತಂಪು ಪಾನೀಯಗಳು: ಇತ್ತೀಚಿನ ದಿನಗಳಲ್ಲಿ ಅದು ಪಾರ್ಟಿಯಾಗಿರಲಿ ಅಥವಾ ಮದುವೆಯ ಆಚರಣೆಯಾಗಿರಲಿ, ತಂಪು ಪಾನೀಯಗಳು ಇದ್ದೇ ಇರುತ್ತವೆ. ಈ ಪಾನೀಯಗಳ ಅತಿಯಾದ ಸೇವನೆಯು ಕ್ಯಾಲ್ಸಿಯಂ ಕೊರತೆಗೆ ಕಾರಣವಾಗಬಹುದು. ಈ ಪಾನೀಯಗಳಲ್ಲಿರುವ ಫಾಸ್ಪರಿಕ್ ಆಮ್ಲವು ಕ್ಯಾಲ್ಸಿಯಂ ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತದೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಮೂಳೆಗಳೊಳಗಿನ ಕ್ಯಾಲ್ಸಿಯಂ ಮಟ್ಟಗಳು ಕಾಲಾನಂತರದಲ್ಲಿ ಕ್ರಮೇಣ ಕಡಿಮೆಯಾಗುತ್ತವೆ. ಮೂಳೆಯ ಆರೋಗ್ಯವನ್ನು ಕಾಪಾಡಲು, ನಿಮ್ಮ ತಂಪು ಪಾನೀಯಗಳ ಸೇವನೆಯನ್ನು ಮಿತಿಗೊಳಿಸುವುದು ಸೂಕ್ತ. ಸಾಮಾನ್ಯವಾಗಿ ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿರುವ ತಂಪು ಪಾನೀಯಗಳ ನಿಯಮಿತ ಸೇವನೆಯು ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತದೆ ಎಂದು ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಗಮನಿಸುತ್ತದೆ. ಈ ಪಾನೀಯಗಳ ಬದಲಿಗೆ ಕ್ಯಾಲ್ಸಿಯಂ ಭರಿತ ಪಾನೀಯಗಳ ಸೇವನೆ ಮಾಡಬಹುದು.
