ಉದಯವಾಹಿನಿ, ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಯುವತಿಯು ರಾತ್ರೋರಾತ್ರಿ ಯುವಕನೋರ್ವನ ಜೊತೆ ಪರಾರಿಯಾಗಿ ಶಾಕ್ ನೀಡಿದ ಘಟನೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಗ್ರಾಮದ ನಿವಾಸಿ ಶಂಕ್ರಮ್ಮ ಇಂದು (ಏ.26 ರಂದು) ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಕುಟುಂಬಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಮೇ 11ಕ್ಕೆ ವಿವಾಹ ಮುಹೂರ್ತ ಕೂಡ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ ಹಿಂದಿನ ರಾತ್ರಿ ಶಂಕ್ರಮ್ಮ ನಾಪತ್ತೆಯಾಗುವ ಮೂಲಕ ಪೋಷಕರಿಗೆ ಆಘಾತ ನೀಡಿದ್ದಾಳೆ.

ನರೇಗಲ್ ಗ್ರಾಮದ ಇಬ್ರಾಹಿಂ ನೆಗಳೂರು ಎಂಬ ಯುವಕನೇ ತಮ್ಮ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಯುವತಿಯ ಪೋಷಕರು ಗಂಭೀರವಾಗಿ ಆರೋಪಿಸಿ ಆಡೂರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಇದು ವ್ಯವಸ್ಥಿತ ‘ಲವ್ ಜಿಹಾದ್’ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯವಾಗಿದ್ದು, ಕೂಡಲೇ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಕುಟುಂಬಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಬ್ರಾಹಿಂ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು, ಪರಿಸ್ಥಿತಿ ಕೈಮೀರುವ ಮುನ್ನ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!