ಉದಯವಾಹಿನಿ, ಸಾಗರ್ (ಉತ್ತರ ಪ್ರದೇಶ): ಅಕ್ಕಿ ಮೇಲಿನ ಹೊಟ್ಟನ್ನು ನಾವು ವ್ಯರ್ಥ ಎಂದು ಬಿಸಾಡುತ್ತೇವೆ. ಇಲ್ಲವೇ, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತೇವೆ. ಆದರೆ, ಅದರಲ್ಲಿ ಕ್ಯಾನ್ಸರ್ ತಡೆಯುವ ಅಂಶವಿದೆ ಎಂಬುದು ನಮಗೆ ಗೊತ್ತಿಲ್ಲ. ಇದೇ ವಿಷಯವಾಗಿ ಉತ್ತರಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಹೆಚ್‌ಯು) ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.
ಹೌದು. ಇಂಥದ್ದೊಂದು ಅಪರೂಪದ ಮತ್ತು ಮಹತ್ವದ ಸಂಶೋಧನೆಯು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಅದರ ಔಷಧವನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. 2023 ರಿಂದ ಈ ಸಂಶೋಧನೆಯು ನಡೆಯುತ್ತಿದೆ.
ಅಕ್ಕಿಯನ್ನು ಸಂಸ್ಕರಿಸಿದ ಬಳಿಕ ಬರುವ ತ್ಯಾಜ್ಯವಾದ ತೌಡನ್ನು ಬಳಸಿ ಕೊಲೊರೆಕ್ಟಲ್ ಕ್ಯಾನ್ಸರ್ (CRC) ತಡೆಗಟ್ಟಬಹುದು ಎಂಬುದು ವಿಜ್ಞಾನಿಗಳ ಸಂಶೋಧನೆ. ಈ ಸಂಶೋಧನೆಯ ಲೇಖಕರಲ್ಲಿ ಒಬ್ಬರಾದ ಬಿಹೆಚ್‌ಯು ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಖಿಲೇಂದ್ರ ಮೌರ್ಯ ಅವರು ಸಾಗರ್ ವಿಶ್ವವಿದ್ಯಾಲಯದಲ್ಲಿ ನಡೆದ ಉಪನ್ಯಾಸವೊಂದರಲ್ಲಿ ಈ ಅಧ್ಯಯನದ ಕುರಿತು ಮಾಹಿತಿ ಹಂಚಿಕೊಂಡರು. ಅಕ್ಕಿ ತೌಡಿನ ಸೇವನೆಯು ಕರುಳಿನ ಸೂಕ್ಷ್ಮಜೀವಿಗಳಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕ್ಯಾನ್ಸರ್ ಮಾದರಿಗಳಲ್ಲಿ ಗಡ್ಡೆಗಳ ಬೆಳವಣಿಗೆಯನ್ನು ನಿಯಂತ್ರಿಸಲು ಸಹಕಾರಿಯಾಗಬಹುದು ಎಂದು ಸಂಶೋಧನೆಯಲ್ಲಿ ಗಮನಿಸಿದ್ದಾಗಿ ಅವರು ಹೇಳಿದ್ದಾರೆ.
