ಉದಯವಾಹಿನಿ, ವಿಶಾಖಪಟ್ಟಣ (ಆಂಧ್ರಪ್ರದೇಶ): ಇಲ್ಲಿನ ಗೀತಂ ಡೀಮ್ಡ್ ವಿಶ್ವವಿದ್ಯಾಲಯದ ಯುವ ಸಂಶೋಧಕರೊಬ್ಬರು ಪ್ರತಿಷ್ಠಿತ ‘ಪ್ರಧಾನ ಮಂತ್ರಿ ಡಾಕ್ಟರಲ್ ರಿಸರ್ಚ್ ಫೆಲೋಶಿಪ್’ಗೆ ಆಯ್ಕೆಯಾಗಿದ್ದಾರೆ. ಕೊಂಡ ವೆಂಕಟ ಸಾಯಿ ಪಿಎಂ ಫೆಲೋಶಿಪ್​​ಗೆ ಆಯ್ಕೆಯಾದವರು. ದೇಶಾದ್ಯಂತ 51 ಸಂಶೋಧಕರು ಈ ಫೆಲೋಶಿಪ್​​ಗೆ ಪಟ್ಟಿಯಾಗಿದ್ದಾರೆ. ಕೊಂಡ ವೆಂಕಟ ಸಾಯಿ ಅವರು ಡಾ.ರಾಹುಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೃದಯಾಘಾತದ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚುವ “ಮಯೋಟ್ರಾಕ್” ಎಂಬ ಅಗ್ಗದ ದರದ ಪೋರ್ಟಬಲ್ ಸಾಧನವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಆವಿಷ್ಕಾರವು ರೋಗನಿರ್ಣಯವನ್ನು ವೇಗವಾಗಿ, ಸುಲಭವಾಗಿ ಮತ್ತು ಅತ್ಯಂತ ಅಗ್ಗವಾಗಿ ಪತ್ತೆ ಮಾಡುವ ಗುರಿಯನ್ನು ಹೊಂದಿದೆ. ವಿಶೇಷವಾಗಿ ಸುಧಾರಿತ ವೈದ್ಯಕೀಯ ಮೂಲಸೌಕರ್ಯಗಳಿಲ್ಲದ ಪ್ರದೇಶಗಳಲ್ಲಿ ಇದು ಹೆಚ್ಚು ಸಹಕಾರಿಯಾಗಲಿದೆ.ಜೀವ ಉಳಿಸಬಲ್ಲ ‘ಮಯೋಟ್ರಾಕ್’: ತಮ್ಮ ಸಂಶೋಧನೆಯ ಬಗ್ಗೆ ಮಾತನಾಡಿರುವ ವೆಂಕಟ ಸಾಯಿ, “ಹೃದಯಾಘಾತವು ಪೂರ್ಣ ಪ್ರಮಾಣದಲ್ಲಿ ಸಂಭವಿಸುವ ಮೊದಲೇ ಅದರ ಲಕ್ಷಣಗಳನ್ನು ಗುರುತಿಸುವುದು ನಮ್ಮ ಗುರಿಯಾಗಿದೆ. ಆಂಬ್ಯುಲೆನ್ಸ್, ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಲ್ಲಿ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಮತ್ತು ಜೀವ ಉಳಿಸಲು ಈ ಸಾಧನವು ನೆರವಾಗಲಿದೆ” ಎಂದು ತಿಳಿಸಿದ್ದಾರೆ.
ಈ ಸಾಧನದ ಪ್ರಮುಖ ವೈಶಿಷ್ಟ್ಯವೆಂದರೆ ಇದರ ಕೈಗೆಟುಕುವ ದರ. ದುಬಾರಿ ಪ್ರಯೋಗಾಲಯಗಳ ಅಗತ್ಯವಿಲ್ಲದೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾರ್ಯನಿರ್ವಹಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗುತ್ತಿದೆ. ಇದು ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲು ಸೂಕ್ತವಾಗಿದೆ.

₹90 ಸಾವಿರ ಮಾಸಿಕ ಪ್ರೋತ್ಸಾಹಧನ: ಪಿಎಂ ಫೆಲೋಶಿಪ್ ವೆಂಕಟ ಸಾಯಿ ಅವರ ಸಂಶೋಧನೆಗೆ ಮಾನ್ಯತೆ ನೀಡುವುದಲ್ಲದೆ, ಆರ್ಥಿಕ ನೆರವನ್ನೂ ನೀಡಲಿದೆ. ಈ ಯೋಜನೆಯಡಿ ಅವರಿಗೆ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು 90 ಸಾವಿರ ರೂಪಾಯಿಗಳ ಗೌರವಧನ ಹಾಗೂ ಯೋಜನೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಈ ಮಾನ್ಯತೆಯು ಜನರಿಗೆ ನೇರವಾಗಿ ಪ್ರಯೋಜನವಾಗುವಂತಹ ಪರಿಹಾರಗಳನ್ನು ಕಂಡುಹಿಡಿಯಲು ತಮಗೆ ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.ಹೃದಯಾಘಾತದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾದ ಚಿಕಿತ್ಸೆ ಬಹಳ ಮುಖ್ಯ. ‘ಮಯೋಟ್ರಾಕ್’ನಂತಹ ಅಗ್ಗದ ತಂತ್ರಜ್ಞಾನಗಳು ತುರ್ತು ಆರೋಗ್ಯ ಸೇವೆಯಲ್ಲಿನ ದೊಡ್ಡ ಕಂದಕವನ್ನು ತುಂಬಲಿವೆ. ವಿಳಂಬ ರೋಗನಿರ್ಣಯದಿಂದ ಸಂಭವಿಸುವ ಸಾವುಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!