ಉದಯವಾಹಿನಿ, ನವದೆಹಲಿ: ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಹಂತವನ್ನು ತಲುಪಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು “ಐತಿಹಾಸಿಕ ಮೈಲಿಗಲ್ಲು” ಎಂದು ಬಣ್ಣಿಸಿದ್ದಾರೆ. “ಈ ಸಾಧನೆಯ ಮೂಲಕ ಭಾರತೀಯ ಪರಮಾಣು ವಿಜ್ಞಾನಿಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ” ಎಂದು ಅವರು ಶ್ಲಾಘಿಸಿದರು.
ಇಂದಿನ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 133ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, “ಈ ಪರಮಾಣು ರಿಯಾಕ್ಟರ್ ಅನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತಿದೆ. ಇದು ‘ವಿಕಸಿತ ಭಾರತ’ದ ನಮ್ಮ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡಲಿದೆ” ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ, ನಮ್ಮ ಪರಮಾಣು ವಿಜ್ಞಾನಿಗಳು ದೊಡ್ಡ ಸಾಧನೆಯ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಕಲ್ಪಕ್ಕಂನಲ್ಲಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ‘ಕ್ರಿಟಿಕಾಲಿಟಿ’ ಹಂತವನ್ನು ತಲುಪಿದೆ. ಈ ಹಂತವು ರಿಯಾಕ್ಟರ್ ಸ್ವಯಂ-ಸ್ಥಿರ ಪರಮಾಣು ಕ್ರಿಯೆಯಲ್ಲಿ ಯಶಸ್ವಿಯಾಗುವ ಹಂತವಾಗಿದೆ. ಅಂದರೆ, ರಿಯಾಕ್ಟರ್‌ನ ಕಾರ್ಯಾಚರಣೆಯ ಹಂತ ಇಂದಿನಿಂದ ಆರಂಭವಾಗಲಿದೆ” ಎಂದು ಪ್ರಧಾನಿ ವಿವರಿಸಿದರು.
ರಿಯಾಕ್ಟರ್ಗೆ ದೇಶಿ ತಂತ್ರಜ್ಞಾನ ಬಳಕೆ: “ಭಾರತದ ಪರಮಾಣು ಇಂಧನ ಪ್ರಯಾಣದಲ್ಲಿ ಇದು ಐತಿಹಾಸಿಕ ಘಟ್ಟ. ಈ ರಿಯಾಕ್ಟರ್ ಅನ್ನು ಸಂಪೂರ್ಣವಾಗಿ ನಮ್ಮ ದೇಶದ ತಂತ್ರಜ್ಞಾನದಿಂದಲೇ ನಿರ್ಮಿಸಲಾಗಿದೆ ಎಂಬುದು ಗಮನಾರ್ಹ. ಭಾರತದ ಪರಮಾಣು ಕಾರ್ಯಕ್ರಮಕ್ಕೆ ಅಮೂಲ್ಯ ಕೊಡುಗೆ ನೀಡಿದ ಎಲ್ಲರನ್ನೂ ನಾನು ಈ ವೇಳೆ ಅಭಿನಂದಿಸುತ್ತೇನೆ. ದೇಶವಾಸಿಗಳ ಜೀವನವನ್ನು ಸುಧಾರಿಸಲು ಅವರು ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ” ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.ಮಾರ್ಚ್ 2024 ರಲ್ಲಿ ಕಲ್ಪಕ್ಕಂನಲ್ಲಿ ರಿಯಾಕ್ಟರ್‌ನ ‘ಕೋರ್ ಲೋಡಿಂಗ್’ ಪ್ರಕ್ರಿಯೆಗೆ ಸಾಕ್ಷಿಯಾಗುವ ಅವಕಾಶ ತಮಗೆ ಲಭಿಸಿತ್ತು ಎಂದು ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಸ್ಮರಿಸಿದರು.
ಕ್ರಿಟಿಕಾಲಿಟಿ ಹಂತ ತಲುಪಿದ ರಿಯಾಕ್ಟರ್: ಭಾರತದ ಇಂಧನ ಭದ್ರತೆಯ ದೃಷ್ಟಿಯಿಂದ ಈ 500 ಮೆಗಾವ್ಯಾಟ್ ಸಾಮರ್ಥ್ಯದ ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಎಪ್ರಿಲ್ 6 ರಂದು ಯಶಸ್ವಿಯಾಗಿ ಮೊದಲ ‘ಕ್ರಿಟಿಕಾಲಿಟಿ’ ಸಾಧಿಸಿದೆ. ಇದು ನಿಯಂತ್ರಿತ ಪರಮಾಣು ವಿದಳನ ಸರಣಿ ಕ್ರಿಯೆಯ ಆರಂಭವಾಗಿದ್ದು, ದೀರ್ಘಕಾಲೀನ ಇಂಧನ ಭದ್ರತೆ ಮತ್ತು ಸ್ವದೇಶಿ ತಂತ್ರಜ್ಞಾನದ ಪ್ರಗತಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
