ಉದಯವಾಹಿನಿ, ಬೇಸಿಗೆಯ ಬಿಸಿಲಿನೊಂದಿಗೆ ಮಾವಿನ ಹಣ್ಣಿನ ಹಂಗಾಮು ಆರಂಭವಾಗುತ್ತಿದ್ದಂತೆಯೇ ಎಲ್ಲರಲ್ಲೂ ಸಿಹಿಯಾದ ಹಣ್ಣುಗಳನ್ನು ಸವಿಯುವ ತವಕ ಹೆಚ್ಚಾಗುತ್ತದೆ. ಆದರೆ, ಹಣ್ಣುಗಳು ಬೇಗ ಮಾಗಲಿ ಎಂಬ ಗ್ರಾಹಕರ ಆಸೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಹಣ್ಣುಗಳನ್ನು ಕೃತಕವಾಗಿ, ಅತೀ ವೇಗವಾಗಿ ಮಾಗಿಸಲು ‘ಕ್ಯಾಲ್ಸಿಯಂ ಕಾರ್ಬೈಡ್’ ಎಂಬ ಅಪಾಯಕಾರಿ ರಾಸಾಯನಿಕವನ್ನು ಬಳಸಲಾಗುತ್ತಿದೆ. ವ್ಯಾಪಾರಿಗಳ ವಲಯದಲ್ಲಿ ‘ಮಸಾಲಾ’ ಎಂದೇ ಕರೆಯಲ್ಪಡುವ ಈ ವಿಷಕಾರಿ ಅಂಶವನ್ನು ಮಾವು, ಬಾಳೆ, ಪಪ್ಪಾಯಿ ಮತ್ತು ಚಿಕ್ಕು ಹಣ್ಣುಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ. ಕಡಿಮೆ ವೆಚ್ಚದಲ್ಲಿ ಹಣ್ಣುಗಳನ್ನು ಮಾಗಿಸಿ ಮಾರುಕಟ್ಟೆಗೆ ತಲುಪಿಸುವ ಇವರ ಲಾಭದ ಆಸೆ ಗ್ರಾಹಕರ ಆರೋಗ್ಯಕ್ಕೆ ಸಂಚಕಾರ ತರುತ್ತಿದೆ.

ಸಾಮಾನ್ಯವಾಗಿ ಗಿಡದ ಮೇಲೆಯೇ ಸಹಜವಾಗಿ ಮಾಗಿದ ಹಣ್ಣುಗಳು ವಿಟಮಿನ್ A, C ಹಾಗೂ ಅನೇಕ ಪೋಷಕಾಂಶಗಳ ಸಮೃದ್ಧ ಮೂಲವಾಗಿರುತ್ತವೆ. ಇವು ನೈಸರ್ಗಿಕ ಸುವಾಸನೆ, ಸಮತೋಲಿತ ರುಚಿ ಮತ್ತು ಸಂಪೂರ್ಣ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದರೆ ಕೃತಕವಾಗಿ ಮಾಗಿಸಿದ ಹಣ್ಣುಗಳು ಕೇವಲ ಹೊರಗಿನ ಬಣ್ಣವನ್ನು ಮಾತ್ರ ಬದಲಿಸುತ್ತವೆಯೇ ಹೊರತು ಒಳಗಿನ ಗುಣಮಟ್ಟವನ್ನಲ್ಲ. ಈ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಕ್ಯಾಲ್ಸಿಯಂ ಕಾರ್ಬೈಡ್‌ನಲ್ಲಿ ಆರ್ಸೆನಿಕ್ ಮತ್ತು ಫಾಸ್ಫರಸ್‌ನಂತಹ ತೀವ್ರ ವಿಷಕಾರಿ ಅಂಶಗಳಿದ್ದು, ಇವು ಮಾನವ ದೇಹಕ್ಕೆ ಅತ್ಯಂತ ಹಾನಿಕಾರಕವಾಗಿವೆ.

ಈ ವಿಷಕಾರಿ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ತಕ್ಷಣದ ಮತ್ತು ದೀರ್ಘಕಾಲೀನ ದುಷ್ಪರಿಣಾಮಗಳು ಉಂಟಾಗುತ್ತವೆ. ಸೇವಿಸಿದ ತಕ್ಷಣ ವಾಂತಿ, ಎದೆ ಹಾಗೂ ಹೊಟ್ಟೆ ಉರಿ, ಅತಿಯಾದ ಬಾಯಾರಿಕೆ ಮತ್ತು ಚರ್ಮದ ಉರಿ ಕಾಣಿಸಿಕೊಳ್ಳಬಹುದು. ಉಸಿರಾಟದ ವ್ಯವಸ್ಥೆಯ ಮೇಲೆ ಇದು ಕೆಮ್ಮು, ಉಬ್ಬಸ ಮತ್ತು ಶ್ವಾಸಕೋಶದ ತೊಂದರೆಗಳನ್ನು ಉಂಟುಮಾಡಿದರೆ, ನರಮಂಡಲದ ಮೇಲೆ ತಲೆನೋವು, ತಲೆತಿರುಗುವಿಕೆ, ನಿದ್ರಾಹೀನತೆ ಮತ್ತು ನೆನಪಿನ ಶಕ್ತಿ ಕುಂಠಿತಗೊಳ್ಳುವಂತಹ ಪರಿಣಾಮಗಳನ್ನು ಬೀರುತ್ತದೆ. ದೀರ್ಘಕಾಲದವರೆಗೆ ಇಂತಹ ಹಣ್ಣುಗಳನ್ನು ಸೇವಿಸುವುದರಿಂದ ಅಲ್ಸರ್ ಮತ್ತು ಜೀರ್ಣಾಂಗ ಸಂಬಂಧಿ ಸಮಸ್ಯೆಗಳು ಕಾಡಬಹುದು. ವಿಶೇಷವಾಗಿ ಗರ್ಭಿಣಿಯರು ಇಂತಹ ಹಣ್ಣುಗಳಿಂದ ದೂರವಿರುವುದು ಅತ್ಯಗತ್ಯ.

Leave a Reply

Your email address will not be published. Required fields are marked *

error: Content is protected !!