ಉದಯವಾಹಿನಿ, ನವದೆಹಲಿ: ಮಾತುಕತೆ ಆರಂಭವಾಗಿ 15 ವರ್ಷಗಳ ಬಳಿಕ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು(ಏ.27) ದೆಹಲಿಯ ಭಾರತ್ ಮಂಟಪದಲ್ಲಿ ಅಧಿಕೃತವಾಗಿ ಸಹಿ ಹಾಕಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್( ಮತ್ತು ನ್ಯೂಜಿಲೆಂಡ್‌ನ ವಾಣಿಜ್ಯ ಸಚಿವ ಟಾಡ್ ಮೆಕ್ಲೇ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಈ ಒಪ್ಪಂದಿಂದ ಭಾರತದಿಂದ ನ್ಯೂಜಿಲೆಂಡ್‌ಗೆ ರಫ್ತಾಗುವ 100% ಸರಕುಗಳಿಗೆ (8,284 ಉತ್ಪನ್ನಗಳು) ಮೊದಲ ದಿನದಿಂದಲೇ ಶೂನ್ಯ ಸುಂಕದ (Duty-free) ಸೌಲಭ್ಯ ಸಿಗಲಿದೆ. ನ್ಯೂಜಿಲೆಂಡ್‌ನಿಂದ ಬರುವ ಸುಮಾರು 95% ರಷ್ಟು ಸರಕುಗಳ ಮೇಲಿನ ಸುಂಕವನ್ನು ಭಾರತವು ಹಂತಹಂತವಾಗಿ ಕಡಿಮೆ ಮಾಡಲಿದೆ ಅಥವಾ ರದ್ದುಗೊಳಿಸಲಿದೆ.
ಭಾರತದ ರಫ್ತಾಗುವ ಜವಳಿ, ಚರ್ಮದ ವಸ್ತುಗಳು, ಫಾರ್ಮಾಸ್ಯುಟಿಕಲ್ಸ್, ಎಂಜಿನಿಯರಿಂಗ್ ಮತ್ತು ಅಟೋಮೊಬೈಲ್ ಸರಕುಗಳು, ಕಡಲ ಉತ್ಪನ್ನಗಳು ಮತ್ತು ಪ್ಲಾಸ್ಟಿಕ್ ಕ್ಷೇತ್ರಗಳಿಗೆ ಹೆಚ್ಚಿನ ಲಾಭವಾಗಲಿದೆ. ನ್ಯೂಜಿಲೆಂಡಿನ ಉಣ್ಣೆ, ಕಲ್ಲಿದ್ದಲು, ಮರ ಮತ್ತು ಕೆಲವು ಹಣ್ಣುಗಳ ರಫ್ತಿಗೆ ಭಾರತದಲ್ಲಿ ಸುಲಭ ಪ್ರವೇಶ ಸಿಗಲಿದೆ. ಮುಂದಿನ 15 ವರ್ಷಗಳಲ್ಲಿ ನ್ಯೂಜಿಲೆಂಡ್‌ನಿಂದ ಭಾರತಕ್ಕೆ ಸುಮಾರು 20 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ (FDI) ಹರಿದುಬರುವ ನಿರೀಕ್ಷೆಯಿದೆ. ಭಾರತೀಯ ವೃತ್ತಿಪರರಿಗೆ () ವಾರ್ಷಿಕವಾಗಿ 5,000 ತಾತ್ಕಾಲಿಕ ಉದ್ಯೋಗ ವೀಸಾಗಳನ್ನು ನೀಡಲು ನ್ಯೂಜಿಲೆಂಡ್ ಒಪ್ಪಿಕೊಂಡಿದೆ.
ಭಾರತದ ಕೃಷಿಕರ ಹಿತದೃಷ್ಟಿಯಿಂದ ಡೈರಿ ಉತ್ಪನ್ನಗಳು (ಹಾಲು, ಬೆಣ್ಣೆ, ಚೀಸ್), ಸಕ್ಕರೆ ಮತ್ತು ಖಾದ್ಯ ತೈಲಗಳಂತಹ ಸೂಕ್ಷ್ಮ ವಲಯಗಳನ್ನು ಈ ಒಪ್ಪಂದದಿಂದ ಸಂಪೂರ್ಣವಾಗಿ ಹೊರಗಿಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು 5 ಶತಕೋಟಿ ಡಾಲರ್‌ಗಳಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
