ಉದಯವಾಹಿನಿ, ಭೋಪಾಲ್: ಮಹಿಳಾ ಅಧಿಕಾರಿಯೊಬ್ಬರಿಗೆ ʻನಿನ್ನ ಹಲ್ಲು ಮುರಿದು, ಜೀವಂತವಾಗಿ ಹೂತು ಹಾಕ್ಬಿಡ್ತೀನಿʼ ಎಂದು ಮಧ್ಯಪ್ರದೇಶದ ಸಚಿವ ನಗರ್ ಸಿಂಗ್ ಚೌಹಾಣ್ ಅವರ ಸಹೋದರ ಇಂದರ್ ಸಿಂಗ್ ಚೌಹಾಣ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಿಳಾ ಸಬಲೀಕರಣದ ಬಗ್ಗೆ ಚರ್ಚಿಸಲು ಮಧ್ಯಪ್ರದೇಶ ವಿಧಾನಸಭೆಯ ವಿಶೇಷ ಅಧಿವೇಶನ ನಿಗದಿಯಾಗಿದ್ದ ದಿನವೇ ಈ ಘಟನೆ ನಡೆದಿದೆ. ಎಫ್‌ಐಆರ್ ಪ್ರಕಾರ, ಈ ಘಟನೆ ಏಪ್ರಿಲ್ 22 ರಂದು ಅಲಿರಾಜ್‌ಪುರದ ಜನಪದ್ ಪಂಚಾಯತ್ ಕಚೇರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಕನ್ಯಾ ವಿವಾಹ್ ಯೋಜನೆಯಡಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಿದ ಬಗ್ಗೆ ಕೋಪಗೊಂಡ ಚೌಹಾಣ್ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಸಿಇಒ ಪ್ರಿಯಾ ಕಾಗ್ ಸಲ್ಲಿಸಿದ ದೂರಿನ ಪ್ರಕಾರ, ಅವರನ್ನು ನಿಂದಿಸಿ ಬೆದರಿಕೆ ಹಾಕಿದ್ದಲ್ಲದೆ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇಲ್ಲಿ ಎಲ್ಲವೂ ನನ್ನ ಇಚ್ಛೆಯಂತೆ ನಡೆಯುತ್ತದೆ. ನಿನ್ನನ್ನು ಜೀವಂತವಾಗಿ ಹೂತು ಹಾಕಲಾಗುವುದು ಎಂದು ಬೆದರಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ ಅಡಿ ಕಠಿಣ, ಜಾಮೀನು ರಹಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಏಪ್ರಿಲ್ 24 ರಂದು ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ, ಚೌಹಾಣ್ ಅನಾರೋಗ್ಯ ಮತ್ತು ಅಧಿಕ ರಕ್ತದೊತ್ತಡವನ್ನು ಉಲ್ಲೇಖಿಸಿ ಜಾಮೀನು ಪಡೆದು ಬಿಡುಗಡೆ ಆಗಿದ್ದಾರೆ.ಅಲಿರಾಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ ರಘುವಂಶ್ ಸಿಂಗ್ ಭಡೋರಿಯಾ ಅವರು ಆರೋಪಿಯ ವಿರುದ್ಧ ಕ್ರಿಮಿನಲ್ ಬೆದರಿಕೆ ಮತ್ತು ಅಡಚಣೆಯ ಆರೋಪ ಹೊರಿಸಲಾಗಿದೆ. ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅಲ್ಲಿ ಅವರಿಗೆ ಜಾಮೀನು ಸಿಕ್ಕಿತು ಎಂದು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!