ಉದಯವಾಹಿನಿ, ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಉದ್ದಕ್ಕೂ ಹರಡಿರುವ ಕೇರನ್ ಹಳ್ಳಿಯಲ್ಲಿ ಶೋಕ ಮಡುಗಟ್ಟಿದೆ. ಇಲ್ಲಿನ ಸರ್ಕಾರಿ ಉದ್ಯೋಗಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದು, ಅವರ ಮೃತದೇಹದ ಅಂತ್ಯಕ್ರಿಯೆ ವಿಭಜನೆಗೊಂಡ ಎರಡೂ ಗ್ರಾಮಸ್ಥರ ದುಃಖಕ್ಕೆ ಕಾರಣವಾಯಿತು.ಈ ಗ್ರಾಮ ಪಾಕಿಸ್ತಾನದ ನೀಲಂ ಎಂದು ಕರೆಯುವ ಕಿಶನ್‌ಗಂಗಾ ನದಿಯ ಬಳಿ ಬೇರ್ಪಟ್ಟಿದೆ. ಭೌಗೋಳಿಕ ಮತ್ತು ದಶಕಗಳ ಸಂಘರ್ಷದಿಂದ ಗಡಿ ಗ್ರಾಮಗಳು ದೂರವಾಗಿದ್ದರೂ, ಸರ್ಕಾರಿ ಅಧಿಕಾರಿಯ ಅಂತ್ಯಕ್ರಿಯೆ ಮಾನವ ಬಂಧುತ್ವದಲ್ಲಿ ಜನರ ನಡುವೆ ಸೇತುವೆ ನಿರ್ಮಿಸಿದೆ.
ಗಂಡರ್‌ಬಾಲ್ ಜಿಲ್ಲೆಯಲ್ಲಿ ನೈಬ್ ತಹಶಿಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ರಾಜಾ ಲಿಯಾಕತ್ ಅಲಿ ಖಾನ್, ಶ್ರೀನಗರದ ಶೇರ್-ಎ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇವರ ಸಾವಿನ ಸುಸ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಎರಡೂ ಗ್ರಾಮಗಳಲ್ಲಿ ದು:ಖ ಆವರಿಸಿತು. ಅತ್ತ ಪಾಕಿಸ್ತಾನ ಕಡೆಯ ಗ್ರಾಮಸ್ಥರು ನದಿ ದಾಟಿ ನಿಯಂತ್ರಣ ರೇಖೆಯ ಅಂಚಿನಲ್ಲಿ ಸಾಲಾಗಿ ನಿಂತು ತಹಶಿಲ್ದಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಈ ಕುರಿತು ಕೇರನ್ ಗ್ರಾಮದ ಗ್ರಾಮದ ಮುಖ್ಯಸ್ಥ ಮಜಾಜ್ ಅಹ್ಮದ್ ಎಂಬುವರು ಮಾತನಾಡಿ, ಸಾವನ್ನಪ್ಪಿದ ಖಾನ್ ಅವರ ತಂದೆ, ಸಹೋದರರು ಮತ್ತು ಸಂಬಂಧಿಕರೂ ಸೇರಿದಂತೆ ಅವರ ಕುಟುಂಬ 1990ರ ದಶಕದ ಆರಂಭದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ವಲಸೆ ಬಂದರು. ಇದೀಗ ಅವರ ಸಂಬಂಧಿಕರು ಗಡಿಯಂಚಿನಲ್ಲಿ ನಿಂತು ಅವರ ಅಂತ್ಯಕ್ರಿಯೆ ವೀಕ್ಷಿಸುವುದನ್ನು ನಮಗೆ ನೋಡಲಾಗಲಿಲ್ಲ” ಎಂದರು.
“ಖಾನ್ ಅವರ ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ನಂತರ ಅವರ ಸಹೋದರರು ಮತ್ತು ಸಹೋದರಿಯರು ಗಡಿಯಂಚಿನ ಬೇಲಿಗಳ ಬಳಿ ಬಂದು ಅಂತ್ಯಕ್ರಿಯೆ ನೋಡಲು ಮುಂದಾದರು. ಗಡಿ ದಾಟಲು ಸಾಧ್ಯವಾಗದೆ ಅಸಹಾಯಕರಾಗಿ, ದೂರದಿಂದಲೇ ಅಂತ್ಯಕ್ರಿಯೆಯ ಮೆರವಣಿಗೆಯನ್ನು ವೀಕ್ಷಿಸಿದರು” ಎಂದು ಹೇಳಿದರು.
“ಖಾನ್ ಅವರ ಅಂತ್ಯಕ್ರಿಯೆಗೆ ಮುನ್ನ ಅವರ ಮೃತದೇಹವನ್ನು ಗಡಿಯಾಚೆಗೆ ಕೊಂಡೊಯ್ದರು. ಮತ್ತೆ ತಕ್ಷಣವೇ ಹಿಂತಿರುಗಿಸಲಾಯಿತು. ಹಿರಿಯ ಸರ್ಕಾರಿ ಅಧಿಕಾರಿಯಾಗಿದ್ದ ಖಾನ್ ಅವರ ಚಿಕ್ಕಪ್ಪ ಭಾರತದ ಗ್ರಾಮದಲ್ಲಿದ್ದು, ಅವರ ಉಳಿದ ಕುಟುಂಬಗಳು ಇನ್ನೊಂದು ಗಡಿಗೆ ಸ್ಥಳಾಂತರಗೊಂಡಿದ್ದಾರೆ. ಖಾನ್ಗೆ ಪತ್ನಿ ಮತ್ತು ನಾಲ್ವರು ಮಕ್ಕಳಿದ್ದಾರೆ” ಎಂದು ಅಹ್ಮದ್ ಮಾಹಿತಿ ನೀಡಿದರು.
ಅಂತಿಮ ಸಂಸ್ಕಾರದ ವೇಳೆ ಪಿಒಕೆಯಲ್ಲಿ ಜನರು ನದಿ ದಡದುದ್ದಕ್ಕೂ ಮೆರವಣಿಗೆಯಲ್ಲಿ ಸಾಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಅಲ್ಲಿಂದಲೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಭಾವನಾತ್ಮಕ ಬಿಳ್ಕೋಡುಗೆ ನೀಡಲಾಯಿತು. ಸಂಜೆ ನಡೆದ ಅಂತ್ಯಕ್ರಿಯೆಯ ಪ್ರಾರ್ಥನೆ ತುಂಬಾ ಭಾವನಾತ್ಮಕವಾಗಿತ್ತು. ಎರಡೂ ಕಡೆಯ ಜನರು ಅವರ ನಿರ್ಗಮನಕ್ಕೆ ಶೋಕ ವ್ಯಕ್ತಪಡಿಸಿದರು. ಈ ಕಡೆಯ ಜನರು ಅಂತಿಮ ವಿಧಿವಿಧಾನಗಳಲ್ಲಿ ದೈಹಿಕವಾಗಿ ಭಾಗಿಯಾದರು. ಇನ್ನೊಂದೆಡೆಯ ಜನರು ಅಸಹಾಯಕರಾಗಿ ಕಣ್ಣೀರು ಹಾಕುತ್ತಿದ್ದರು.
