ಉದಯವಾಹಿನಿ, ಟೆಹ್ರಾನ್ (ಇರಾನ್​): ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸುವ ಗುರಿಯೊಂದಿಗೆ ಟೆಹ್ರಾನ್​ ಇರಾನ್​, ಮೂರು ಹಂತದ ಪ್ರಸ್ತಾವನೆಯೊಂದನ್ನು ಅಮೆರಿಕಕ್ಕೆ ಮಧ್ಯವರ್ತಿಗಳ ಮೂಲಕ ತಲುಪಿಸಿದೆ. ಅಲ್​ ಮಯಾದೀನ್​ ವರದಿ ಪ್ರಕಾರ, ಹಾರ್ಮುಜ್​ ಜಲಸಂಧಿ ಮುಕ್ತಗೊಳಿಸುವುದು ಮತ್ತು ಯುದ್ಧವನ್ನು ಕೊನೆಗೊಳಿಸುವ ಚೌಕಟ್ಟನ್ನು ಇರಾನಿ ಅಧಿಕಾರಿಗಳು ರೂಪಿಸಿದ್ದು, ಇದು ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಪ್ರಮುಖ ಸೂಚನೆಯಾಗಿದೆ ಎಂದು ತಿಳಿಸಿದೆ.
ಮೂರು ಹಂತದ ಪ್ರಸ್ತಾವನೆಯಲ್ಲಿ ಆರಂಭಿಕ ಹಂತದಲ್ಲಿ ಅಮೆರಿಕ ಇಸ್ರೇಲ್​ ಆಕ್ರಮಣಗೊಳಿಸುವುದು. ಇರಾನ್​ ಮತ್ತು ಲೆಬನಾನ್​ ಮೇಲೆ ಮತ್ತೆ ಯುದ್ಧ ಆರಂಭಿಸದಂತೆ ಭದ್ರತೆಯನ್ನು ಖಾತ್ರಿ ಮಾಡಿಕೊಳ್ಳುವುದನ್ನು ಗುರಿಯಾಗಿಸಿದೆ. ಈ ಹಂತದಲ್ಲಿ ಇರಾನ್​ ಯಾವುದೇ ಇತರೆ ವಿಚಾರಗಳನ್ನು ಚರ್ಚಿಸುವುದಿಲ್ಲ ಎಂದು ತಿಳಿಸಿದ್ದು, ಒಮನ್​ ಜೊತೆಗೆ ಈ ಯೋಜನೆ ಸಮನ್ವಯಗೊಳಿಸಲು ಚಿಂತಿಸಿದೆ.
ಮೊದಲ ಹಂತದ ಒಪ್ಪಂದಕ್ಕೆ ಸಮ್ಮತಿ ಸಿಕ್ಕಲ್ಲಿ ಎರಡನೇ ಹಂತಕ್ಕೆ ಮುಂದುವರೆಯಲಿದ್ದು, ಇದರಲ್ಲಿ ಹಾರ್ಮುಜ್​ ಜಲಸಂಧಿ ನಿರ್ವಹಣೆಯನ್ನು ಕೇಂದ್ರಿಕರಿಸಿದೆ. ಈ ಕಾರ್ಯತಂತ್ರದ ಜಲಮಾರ್ಗವನ್ನು ನಿಯಂತ್ರಿಸುವ ಹೊಸ ಕಾನೂನು ಚೌಕಟ್ಟನ್ನು ಸ್ಥಾಪಿಸಲು ಒಮನ್‌ನೊಂದಿಗೆ ಸಮನ್ವಯವನ್ನು ಯೋಜನೆ ರೂಪಿಸುತ್ತದೆ ಎಂದು ವರದಿ ತಿಳಿಸಿದೆ.ಮೂರನೇ ಹಂತದಲ್ಲಿ ಇರಾನ್​ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತನಾಡಲಿದೆ. ಮೊದಲ ಎರಡು ಹಂತಗಳು ಯಶಸ್ವಿಯಾದ ಬಳಿಕವೇ ಅದು ಪರಮಾಣು ಕುರಿತ ಚರ್ಚೆಗೆ ಸಮ್ಮತಿಸಲಿದೆ.
ಇರಾನಿ ವಿದೇಶಾಂಗ ಸಚಿವ ಅಬ್ಬಾಸ್​ ಅರಘ್ಚಿ ಅವರ ನಿಯೋಗ ಒಮನ್​ ಮತ್ತು ಪಾಕಿಸ್ತಾನದ ಭೇಟಿ ಬಳಿಕ ಮಾಸ್ಕೋ ತಲುಪಿದ ನಂತರ ಈ ಬೆಳವಣಿಗೆ ನಡೆದಿದೆ.

ಮಾತುಕತೆಗೆ ಇರಾನ್​ ಸಿದ್ಧವಾಗಿದ್ದಲ್ಲಿ ವಾಷಿಂಗ್ಟನ್​ಗೆ ಕರೆ ಮಾಡಬಹುದು ಎಂದು ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿಕೆ ನೀಡಿದ್ದರು. ಈ ವೇಳೆ ಅಮೆರಿಕ ಇರಾನ್ ಎಂದಿಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು ಎಂಬುದನ್ನು ದೃಢಪಡಿಸಿದೆ. ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಮಾತುಕತೆ ವಿಫಲವಾದ ಬಳಿಕ ಅರಘ್ಚಿ, ಒಮನ್​ ಮತ್ತು ಪಾಕಿಸ್ತಾನದ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಇದಾದ ಬಳಿಕ ಉನ್ನತ ಮಟ್ಟದ ಚರ್ಚೆಗೆ ರಷ್ಯಾಕ್ಕೆ ತೆರಳಿದ್ದು, ಇಲ್ಲಿ ಪುಟಿನ್​ ಜೊತೆಗೆ ಮಾತುಕತೆ ನಡೆಸಲಿದ್ದಾರೆ.

ಭಾನುವಾರ ಮಾತನಾಡಿದ್ದ ಟ್ರಂಪ್​, ಮಾತುಕತೆ ತಂಡವನ್ನು ನಿಯೋಜಿಸಲು ಇಷ್ಟವಿಲ್ಲ ಎಂಬುದನ್ನು ತಿಳಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅಮೆರಿಕ ಸಮಾಲೋಚಕರನ್ನು 18 ಗಂಟೆಗಳ ವಿಮಾನದಲ್ಲಿ ಕಳುಹಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಮಾತುಕತೆಯು ತುಂಬಾ ದೀರ್ಘವಾಗಿದೆ. ಅದನ್ನು ನಾವು ದೂರವಾಣಿ ಮೂಲಕವೂ ಮಾಡಬಹುದು. ಇರಾನಿಯನ್ನರು ಬಯಸಿದರೆ ನಮಗೆ ಕರೆ ಮಾಡಬಹುದು. ನಾವು ಪ್ರಯಾಣಿಸುವುದಿಲ್ಲ ಎಂದಿದ್ದರು. ಫೆ. 28ರಂದು ಆರಂಭವಾದ ಇರಾನ್​ ಮೇಲಿನ ಇಸ್ರೇಲ್​ ಮತ್ತು ಅಮೆರಿಕ ಸಂಘರ್ಷ ಇನ್ನೂ ಅಂತ್ಯ ಕಂಡಿಲ್ಲ. ಎರಡು ವಾರದ ಕದನ ವಿರಾಮದ ಬಳಿಕವೂ ನಾಯಕರು ಯುದ್ಧದ ಅಂತ್ಯಕ್ಕೆ ಮಾತುಕತೆಯನ್ನು ಪೂರ್ಣಗೊಳಿಸಿಲ್ಲ. ಇಸ್ಲಾಮಾಬಾದ್​ನಲ್ಲಿ ನಡೆದ ಮೊದಲ ಹಂತದ ಮಾತುಕತೆ ವಿಫಲವಾದ ಬೆನ್ನಲ್ಲೇ ಎರಡನೇ ಹಂತದ ಮಾತುಕತೆ ಪ್ರಯತ್ನ ಯಶಸ್ವಿಯಾಗಲಿಲ್ಲ. ಈ ನಡುವೆ ಹಾರ್ಮುಜ್​ ಜಲಸಂಧಿ ಮೇಲೆ ಇರಾನ್​ ಹಿಡಿತ ಮುಂದುವರೆದಿದ್ದು, ಅಮೆರಿಕ ದಿಗ್ಬಂಧನ ಕೂಡ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!