ಉದಯವಾಹಿನಿ, ಟೆಹ್ರಾನ್ (ಇರಾನ್): ಇಸ್ಲಾಮಾಬಾದ್ ಪರಿಣಾಮಕಾರಿ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುವ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಅದು ವಾಷಿಂಗ್ಟನ್ ಪರ ಹೆಚ್ಚು ಒಲವು ಹೊಂದಿದೆ ಎಂದು ಇರಾನ್‌ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರರಾಗಿರುವ ಇಬ್ರಾಹಿಂ ರೆಜೈ ಹೇಳಿದ್ದಾರೆ.ಇರಾನ್ ಮತ್ತು ಅಮೆರಿಕ ನಡುವೆ ಸಂಘರ್ಷ ಶಮನಗೊಳಿಸುವ ದ್ವಿಪಕ್ಷೀಯ ರಾಜತಾಂತ್ರಿಕ ಪ್ರಯತ್ನಗಳು ಮುಂದುವರೆಯುತ್ತಿರುವ ಹೊತ್ತಿನಲ್ಲಿ ಇರಾನ್‌ನ ಹಿರಿಯ ಅಧಿಕಾರಿಗಳು, ಸಂಧಾನದ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪಾಕಿಸ್ತಾನ ಉತ್ತಮ ಸ್ನೇಹಿತ, ನಮ್ಮ ಉತ್ತಮ ನೆರೆಯ ದೇಶ. ಆದರೆ, ಸಂಧಾನದ ಮಾತುಕತೆಗೆ ಉತ್ತಮ ಮಧ್ಯವರ್ತಿಯಲ್ಲ. ಅದು ಅಗತ್ಯ ವಿಶ್ವಾಸಾರ್ಹ ಕೊರತೆ ಹೊಂದಿದೆ. ಅಲ್ಲದೇ, ಪಾಕಿಸ್ತಾನ ಸದಾ ಟ್ರಂಪ್ ಹಿತಾಸಕ್ತಿ ಪರ ನಿಲುವು ಹೊಂದಿದ್ದು, ಅಮೆರಿಕದ ಇಚ್ಛೆಯ ವಿರುದ್ಧ ಮಾತನಾಡಲಿಲ್ಲ ಎಂದಿದ್ದಾರೆ.
ಮಧ್ಯವರ್ತಿಯು ಕೇವಲ ಒಬ್ಬರ ಪರವಾಗಿ ಕೆಲಸ ಮಾಡಿತು ಎಂದಿರುವ ರೆಜೈ, ಅಮೆರಿಕನ್ನರು ಲೆಬನಾನ್‌ಗೆ ಸಂಬಂಧಿಸಿದಂತೆ ಬದ್ಧತೆಗಳನ್ನು ಹೊಂದಿದ್ದರು ಅವುಗಳನ್ನು ಪೂರೈಸಲು ವಿಫಲರಾದರು ಎಂದು ಅವರು ಹೇಳಲಿಲ್ಲ. ಅವರು ಪ್ರಸ್ತಾವಗಳನ್ನು ಸರಿದೂಗಿಸಬೇಕಿತ್ತು. ಮಧ್ಯವರ್ತಿಗಳು ನಿಷ್ಪಕ್ಷಪಾತವಾಗಿರಬೇಕು. ಬರೀ ಒಂದು ಕಡೆ ವಾಲಬಾರದು ಎಂದು ಹೇಳಿದರು.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಇಸ್ಲಾಮಾಬಾದ್ ಭೇಟಿ ಬಳಿಕ ಈ ಟೀಕೆಗಳು ವ್ಯಕ್ತವಾಗಿವೆ. ಅರಘ್ಚಿ, ಇಸ್ಲಾಮಾಬಾದ್ ಭೇಟಿ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಜೊತೆಗೆ ಪ್ರಾದೇಶಿಕ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದರು.
ಪಾಕಿಸ್ತಾನ ಭೇಟಿಗೂ ಮುನ್ನ ಅರಘ್ಚಿ, ಒಮನ್ನಲ್ಲಿ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್ ಜೊತೆಗೆ ಮಾತುಕತೆ ನಡೆಸಿದ್ದು, ಜಲಮಾರ್ಗದ ಸುರಕ್ಷತೆ ಮತ್ತು ಗಡಿ ರಾಜತಾಂತ್ರಿಕ ಚೌಕಟ್ಟಿನ ಕುರಿತು ಚರ್ಚಿಸಿದರು. ಈ ಚರ್ಚೆಯಲ್ಲಿ ಜಲಸಂಧಿಯಲ್ಲಿ ಹೊಸ ಕಾನೂನಾತ್ಮಕ ಚೌಕಟ್ಟು, ಪರಿಹಾರ ಬೇಡಿಕೆ, ಭದ್ರತಾ ಭರವಸೆ ಮತ್ತು ಅಮೆರಿಕ ನೌಕೆ ನಿರ್ಬಂಧ ತೆರವು ಕುರಿತು ಚರ್ಚೆ ನಡೆಸಲಾಯಿತು.
ಈ ನಾಯಕರ ಬಳಿಕ ಅರಘ್ಚಿ ಉನ್ನತ ಹಂತದ ಮಾತುಕತೆಗೆ ಮಾಸ್ಕೋಗೆ ಪ್ರಯಾಣ ನಡೆಸಿದ್ದು, ಶಾಂತಿ ಮಾತುಕತೆಯು ನಿಧಾನವಾಗುತ್ತಿರುವುದು ಕಂಡುಬಂದಿದೆ. ರಾಜತಾಂತ್ರಿಕ ಬಿಕ್ಕಟ್ಟು ವಾಷಿಂಗ್ಟನ್ ನಿಲುವು ಬದಲಾವಣೆಗೂ ಕಾರಣವಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾತುಕತೆಗಾಗಿ 18 ಗಂಟೆಗಳ ಪ್ರಯಾಣ ಬೇಕಿಲ್ಲ, ಕರೆ ಮೂಲಕವೇ ಮಾತುಕತೆ ನಡೆಸುವಂತೆ ಇರಾನಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
