ಉದಯವಾಹಿನಿ, ಕೀವ್: ಚೆರ್ನೊಬಿಲ್ ಅಣುಸ್ಥಾವರ ದುರಂತದ 40ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ರವಿವಾರ ಉಕ್ರೇನ್, ಅತ್ಯಧಿಕ ಪ್ರಮಾಣದಲ್ಲಿ ವಿಕಿರಣದ ಬಾಧೆಗೊಳಗಾಗಿ ಮೃತಪಟ್ಟ ಸಾವಿರಾರು ಮಂದಿಗಾಗಿ ಶ್ರದ್ದಾಂಜಲಿ ಅರ್ಪಿಸಿತು.
1986ರಲ್ಲಿ ಉಕ್ರೇನ್ ಚೆರ್ನೊಬಿಲ್ ನಲ್ಲಿ ಅಣುಸ್ಥಾವರದಲ್ಲಿ ವಿಕಿರಣ ಸೋರಿಕೆಯಿಂದಾಗಿ ಸಾವನ್ನಪ್ಪಿದ್ದ ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕಾರ್ಮಿಕರ ಗೌರವಾರ್ಥವಾಗಿ ಸ್ಲಾವಿಯುಟಿಚ್ಚಲ್ಲಿ ನಿರ್ಮಿಸಲಾದ ಸ್ಮಾರಕದ ಮುಂದೆ ನೂರಾರು ಜನರು ಮೊಂಬತ್ತಿಗಳನ್ನು ಬೆಳಗಿ ಗೌರವ ಅರ್ಪಿಸಿದರು.
ಚೆರ್ನೊಬಿಲ್ ದುರಂತ ನಡೆದ ಸ್ಥಳದ ಮೇಲೆ ರಶ್ಯವು ಪದೇ ಪದೇ ಡೋನ್ ದಾಳಿಗಳನ್ನು ನಡೆಸುವ ಮೂಲಕ ಪರಮಾಣು ಭಯೋತ್ಪಾದನೆಯನ್ನು ನಡೆಸುತ್ತಿದೆಯೆಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝಲೆನ್ಸಿ ಈ ಸಂದರ್ಭದಲ್ಲಿ ಆಪಾದಿಸಿದ್ದಾರೆ.
ಉಕ್ರೇನ್ ಮೇಲೆ ಆಕ್ರಮಣವನ್ನು ನಡೆಸುವ ಮೂಲಕ ರಶ್ಯವು ಜಗತ್ತನ್ನು ಮತ್ತೊಮ್ಮೆ ಮಾನವ ನಿರ್ಮಿತ ವಿಕೋಪದ ಅಂಚಿಗೆ ತಂದಿದ್ದಾರೆಂದು ಝಿಲೆನ್ಸಿ ಹೇಳಿದ್ದಾರೆ.
ಚೆರ್ನೊಬೈಲ್ನಲ್ಲಿ ರಶ್ಯದ ಡೋನ್ಗಳು ನಿಯಮಿತವಾಗಿ ಹಾರಾಡುತ್ತಿದ್ದುಅವುಗಳಲ್ಲಿ ಒಂದು ಕಳೆದ ವರ್ಷ ಅಣುಸ್ಥಾವರದ ಸ್ಥಳದ ಮೇಲೆ ನಿರ್ಮಿಸಲಾಗಿದ್ದ ರಕ್ಷಣಾತ್ಮಕ ಕವಚವನ್ನು ಒಡೆದುಹಾಕಿದ್ದು, ವಿಕಿರಣ ಸೋರಿಕೆಯ ಅಪಾಯವನ್ನುಂಟು ಮಾಡಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಂತಹ ಪರಮಾಣು ಭಯೋತ್ಪಾದನೆ ಮುಂದುವರಿಯುವುದಕ್ಕೆ ಜಗತ್ತು ಅವಕಾಶ ನೀಡುವುದಿಲ್ಲ. ಇಂತಹ ಸ್ಟೇಚ್ಛೆಯ ದಾಳಿಗಳನ್ನು ನಿಲ್ಲಿಸುವಂತೆ ರಶ್ಯವನ್ನು ತಡೆಯುವುದೇ ಇಂತಹ ದುರಂತವನ್ನು ತಪ್ಪಿಸಲು ಇರುವ ಅತ್ಯುತ್ತಮ ದಾರಿಯಾಗಿದೆ ಎಂದು ಝಿಲೆನ್ಸಿ ತಿಳಿಸಿದ್ದಾರೆ.
